April 15, 2026
0000002

ಹಿರಿಯೂರು :

ನಮ್ಮ ಭಾರತ ದೇಶವು ಸರ್ವಧರ್ಮಗಳನ್ನು ಗೌರವಿಸುವ ರಾಷ್ಟ್ರವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಹ ಸರ್ವ ಧರ್ಮಗಳ ಸಮನ್ವಯತೆಯನ್ನು ಬೆಳೆಸುವ ಮೂಲಕ ಎಲ್ಲಾ ಧರ್ಮಗಳನ್ನು ಗೌರವಿಸುವ, ಪ್ರೀತಿಸುವ ಮನೋಭಾವವನ್ನು ಶಾಲಾ ಹಂತದಲ್ಲಿಯೇ ಬೆಳೆಸುವ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಪೋಷಕರು ಸಹ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆಯನ್ನು ನೀಡಿದ್ದಾರೆ ಎಂಬುದಾಗಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಹಬ್ಬಗಳ ಸಾಮರಸ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ “ಧಾರ್ಮಿಕ ಹಬ್ಬಗಳ ಆಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಸಮೂಹ ಸಾಮರಸ್ಯ ಹಾಗೂ ಸೌಹಾರ್ಧತೆಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಧರ್ಮಗಳ ಹಬ್ಬಗಳಾದ ರಂಜಾನ್, ಹೋಲಿ, ಹಾಗೂ ಯುಗಾದಿ ಹಬ್ಬಗಳನ್ನು ನಮ್ಮ ಶಾಲೆಯಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ವಿವಿಧತೆಯಲ್ಲಿ ಏಕತೆ ಎಂಬ ಕಲ್ಪನೆಯನ್ನು ಮೂಡಿಸಲಾಗುತ್ತಿದೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಎಲ್.ಕೆ.ಜಿ. ಹಾಗೂ ಯುಕೆಜಿಯ ವಿದ್ಯಾರ್ಥಿಗಳು ರಂಜಾನ್, ಯುಗಾದಿ ಹಾಗೂ ಹೋಳಿ ಹಬ್ಬದ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ, ಪುಟಾಣಿ ವಿದ್ಯಾರ್ಥಿಗಳು ಪರಸ್ಪರ ಬಣ್ಣಹಚ್ಚಿ ಶಿಕ್ಷಕ-ಶಿಕ್ಷಕಿಯರೊಂದಿಗೆ ಹೋಳಿ ಆಡುವ ಮೂಲಕ ಕುಣಿದುಕುಪ್ಪಳಿಸಿ, ಸಂಭ್ರಮಿಸಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಪೂಜಾ, ಶಿವರಾಜ್ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *