April 15, 2026
00001

ಹಿರಿಯೂರು :

ಸಮಾಜದ ಪ್ರತಿ ಮಹಿಳೆಯಲ್ಲೂ ಒಂದು ಶಕ್ತಿ ಇದೆ, ಮಹಿಳೆಯರಲ್ಲಿ ನಾವು ಸಾಧಿಸಬೇಕೆಂಬ ಛಲವಿದ್ದರೆ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ, ಈ ನಿಟ್ಟಿನಲ್ಲಿ ಮಹಿಳೆಯರು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆಯಲು ಮುಂದಾಗಬೇಕು ಎಂಬುದಾಗಿ ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಶ್ರೀಮತಿ ಗಾಯತ್ರಿ ಶಿವರಾಂರವರು ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ರೋಟರಿ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸರ್ವೋದಯ, ಬ್ರಹ್ಮಜ್ಞಾನ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಬ್ಯಾಂಕ್ ಉದ್ಯೋಗ ಮಾಡಿಕೊಂಡು, ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ನಾನು ಕ್ಯಾನ್ಸರ್ ಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ, ಆದರೆ ಕಾಯಿಲೆ ಬಗ್ಗೆ ನಾನೆಂದೂ ತಲೆಕೆಡಿಸಿಕೊಂಡಿಲ್ಲ, ರೆಡ್ ಕ್ರಾಸ್ ಸೇವಾಸಂಸ್ಥೆ ಸಭಾಪತಿಯಾಗಿ ಕೂಡ ನಾನು ಕಾರ್ಯ ನಿರ್ವಹಿಸುತ್ತ ಸಮಾಜಸೇವೆ ಮಾಡುವ ಮನೋಧೈರ್ಯ ಬೆಳೆಸಿಕೊಂಡಿದ್ದೇನೆ ಎಂಬುದಾಗಿ ಹೇಳಿದರು.

ಅರಣ್ಯ ಇಲಾಖೆ ರೇಂಜರ್ ಶ್ರೀಮತಿ ನಮಿತಾಅಭಿನಂದನ್ ಮಾತನಾಡಿ, ಅರಣ್ಯ ಇಲಾಖೆಯ ಕೆಲಸ ಮಹಿಳೆಯರಿಗೆ ಕಷ್ಟಕರ ಕೆಲಸವಾಗಿದ್ದರೂ ನನ್ನ ತಂದೆಯಾದ ಎಲ್.ಐ.ಸಿ ಕೃಷ್ಣನಾಯ್ಕ್ ರವರ ಆಸೆಯಂತೆ ಅರಣ್ಯ ಇಲಾಖೆಯ ರೇಂಜರ್ ಕೆಲಸ ಪಡೆದು, ಅರಣ್ಯ ಸಂರಕ್ಷಣೆ, ಪ್ರಾಣಿಗಳ ಸುರಕ್ಷತೆ ಕಾಪಾಡಲು ಮುಂದಾಗಿದ್ದು, ನನ್ನ ಕುಟುಂಬದ ಬೆಂಬಲದಿಂದ ನಾನು ನನ್ನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎಂಬುದಾಗಿ ಹೇಳಿದರು.

ಜ್ಷಾನದೀಪ ವಿದ್ಯಾಮಂದಿರ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಬದರೀನಾಥ್ ಮಾತನಾಡಿ, ನಮ್ಮ ದೇಶವನ್ನು ಮುನ್ನಡೆಸುವಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಂತಹ ಅನೇಕ ಮಹಿಳೆಯರು ಶ್ರಮಿಸುತ್ತಿದ್ದು, ಅಂತಹ ಸಾಧಕ ಮಹಿಳೆಯರನ್ನು ಗುರುತಿಸಿ, ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂಬುದಾಗಿ ಹೇಳಿದರು.

ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮರಾಣಿ ಮಾತನಾಡಿ, ಕುಟುಂಬದಲ್ಲಿ ಮಹಿಳೆಯು ಶಿಕ್ಷಣವಂತಳಾದರೆ ಆ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಸ್ಥಾಮನಮಾನವನ್ನು ಪಡೆದುಕೊಳ್ಳುವ ಜೊತೆಗೆ ಸಮಾಜದಲ್ಲಿ ಸಂಸ್ಕಾರವಂತ, ಸಮಾಜಸೇವಕರಾಗಿ ರೂಪುಗೊಳ್ಳುತ್ತಾರೆ, ಎಂಬುದಕ್ಕೆ ಇಂದಿನ ವೇದಿಕೆಯಲ್ಲಿರುವ ಮಹಿಳೆಯರು ಸಾಕ್ಷಿಯಾಗಿದ್ದಾರೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಚೇರ್ಮನ್ ನಿವೃತ್ತ ಪ್ರಾಂಶುಪಾಲರಾದ ಬಿ.ಕೆ.ನಾಗಣ್ಣ, ರೋಟರಿ ಅಧ್ಯಕ್ಷ ಕೆ.ಎ.ವರುಣ್, ಸರ್ವೋದಯ ಬ್ರಹ್ಮ ಜ್ಞಾನ ಸಮಾಜ ಅಧ್ಯಕ್ಷರಾದ ಎಲ್.ಆನಂದಶೆಟ್ಟಿ, ಯುತ್ ರೆಡ್ ಕ್ರಾಸ್ ಶಶಿಕಲಾ ರವಿಶಂಕರ್, ಹೆಚ್.ಎಸ್. ಪ್ರಶಾಂತ್ ಸೇರಿದಂತೆ ವಿವಿಧ ಸೇವಾಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *