June 8, 2026
000000000000003

ಹಿರಿಯೂರು :

ಪ್ರಾಚೀನ ಕಾಲದಿಂದಲೂ ಮಹಿಳೆಯರು ನಿರಂತರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಈ ಪುರುಷ ಪ್ರಧಾನ ಸಮಾಜದಲ್ಲಿ  ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ನಿಂತಿಲ್ಲ, ಈ ದೌರ್ಜನ್ಯಗಳು ನಿಲ್ಲಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಬೇಕು ಎಂಬುದಾಗಿ ಸಮಾಜ ಸೇವಕಿ ಶ್ರೀಮತಿ ಶಶಿಕಲಾರವಿಶಂಕರ್ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕೇವಲ ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುವ ಜನರ ಮಧ್ಯೆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಯುತ ಆಲೂರುಹನುಮಂತರಾಯಪ್ಪನವರು ನಮ್ಮ ರೆಡ್ ಕ್ರಾಸ್ ಸಂಸ್ಥೆಗೆ ಸುಮಾರು 10 ಲಕ್ಷ ರೂಗಳ “ಅಂಬ್ಯುಲೆನ್ಸ್” ದೇಣಿಗೆಯಾಗಿ ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಅವರ ಹೃದಯವಂತಿಕೆಯನ್ನು ನಾವು-ನೀವೆಲ್ಲರೂ ನೆನೆಯಲೇಬೇಕಾಗಿದೆ ಎಂಬುದಾಗಿ ಹೇಳಿದರು.     

ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಡಾ.ಸುಜಾತ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಅಷ್ಟೆ ಸೀಮಿತಗೊಳಿಸಬಾರದು. ಅದುನಿತ್ಯ ಆಚರಣೆಯಲ್ಲಿರಬೇಕು, ಮಹಿಳೆಯರು ತಮ್ಮಲ್ಲಿರುವ ಪ್ರತಿಭೆಯಿಂದ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿದ್ದು, ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುವ ಮೂಲಕ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ ಎಂಬುದಾಗಿ ಹೇಳಿದರು.

ವಕ್ಫ್ ಪೌಂಡೇಷನ್ ನಿರ್ದೇಶಕರಾದ ಶ್ರೀಮತಿ ರಜಿಯಾಸುಲ್ತಾನ ಮಾತನಾಡಿ, ಮಹಿಳೆಯರು ಜ್ಯೋತಿ ಬಾಪುಲೆ, ಸಾವಿತ್ರಿಬಾಯಿಪುಲೆ, ಕಿತ್ತೂರು ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಪ್ರತಿಭಾ ಪಾಟೇಲ್, ಇಂದಿರಾಗಾಂಧಿಯವರಂತಹ ಸಾಧಕ ಮಹಿಳೆಯರ ಬದುಕನ್ನು ಹಾಗೂ ಅವರ ಸಾಧನೆಗಳನ್ನು ಅರಿತುಕೊಂಡು ವಿದ್ಯಾರ್ಥಿನಿಯರು ಶಿಕ್ಷಣವಂತರಾಗುವ ಮೂಲಕ ದೇಶದ ಪ್ರತಿಷ್ಠಿತ ಹುದ್ದೆಗಳಿಗೆ ಹೋಗಬೇಕು ಎಂಬುದಾಗಿ ಹೇಳಿದರು.    

ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿಯಾದವ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಯರು ನೂರಾರು ನೋವು, ಸಂಕಟಗಳನ್ನು ಅನುಭವಿಸುತ್ತಾ ಬಂದಿದ್ದು, ಆದರೆ ಅದನ್ನು ಮೀರಿ ಬೆಳೆದು ಈಗ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ಪರುಷರಿಗಿಂತ ಮಹಿಳೆಯರೇ ಹೆಚ್ಚು ಸಾಧನೆಗಳನ್ನು ಮಾಡುತ್ತಿದ್ದಾರೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು, ತಾಯಿ ತನ್ನ ಮಗುವಿಗೆ ಮೊದಲ ಶಿಕ್ಷಕಿಯಾಗಿ ಆದರ್ಶ, ತತ್ವ ಸಿದ್ಧಾಂತಗಳನ್ನ ತಿಳಿಸುವ ಮಹಾನ್ ಸಾಧಕಿಯಾಗಿದ್ದಾರೆ. ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲೂ ಉತ್ತಮ ಸಾಧನೆ ಮಾಡಿದ್ದು, ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ದೆಹಲಿಯ ಪ್ರತಿಷ್ಠಿತ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ( ಐ.ಎ.ಆರ್.) ಕೃಷಿ ಸಂಶೋಧನೆ ನಡೆಸಿ ಡಾಕ್ಟರೇಟ್ ಆಫ್ ಫಿಲಾಸಫಿ (ಪಿ.ಹೆಚ್.ಡಿ) ಪದವಿ ಪಡೆದ ತಾಲ್ಲೂಕಿನ ಬಾಲೆನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಕುಮಾರಿ ಟಿ.ಕಾವ್ಯ ಅವರಿಗೆ ಸನ್ಮಾನಿಸಿ 5ಸಾವಿರ ರೂಗಳ ಗೌರವಧನ ನೀಡಲಾಯಿತು.  

ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವ ಸಾಧಕ ಮಹಿಳೆಯರಾದ ಸಮಾಜಸೇವಕಿ ಶ್ರೀಮತಿ ಶಶಿಕಲಾರವಿಶಂಕರ್, ವಕ್ಪ್ ಫೌಂಡೇಷನ್ ನಿರ್ದೇಶಕರಾದ ರಜಿಯಾ ಸುಲ್ತಾನ, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಡಾ.ಸುಜಾತ, ತಾಲ್ಲೂಕು ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮತಾಗೌಡ, ನಗರಸಭೆಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿಯಾದವ್, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷೆ ಶ್ರೀಮತಿ ಅಂಬಿಕಾನಾಯಕ್, ಇವರುಗಳನ್ನು ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆಗಳಾಗಿ ಸೀರೆಗಳನ್ನು ಉಡುಗೊರೆಯಾಗಿ ನೀಡಿ, ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕಿಯರುಗಳಾದ ಶ್ರೀಮತಿ ಗಂಗಮ್ಮ, ಶ್ರೀಮತಿ ಸಬೀಹಾ, ಶ್ರೀಮತಿ ರಂಜಿತಾ, ಶ್ರೀಮತಿ ಮುಬೀನಾ, ಶ್ರೀಮತಿ ಹೇಮಲತಾ, ಶ್ರೀಮತಿ ದ್ರಾಕ್ಷಾಯಣಿ,  ಶ್ರೀಮತಿ ಸಾಧಿಕಾ, ಶ್ರೀಮತಿ ಮಮತಾ, ಕಾವ್ಯ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಪೂಜಾ, ಶಿವರಾಜ್ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು. 

About The Author

Leave a Reply

Your email address will not be published. Required fields are marked *