
ಹಿರಿಯೂರು :
ನಗರದ ವೇದಾವತಿ ಬಡಾವಣೆಯ 3 ನೇ ವಾರ್ಡ್ ನ ಚಂದ್ರಾ ಲೇ ಔಟ್ ಗೆ ಸೇರಿದ “ಡಾಗ್ ಸರ್ಕಲ್” ಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲ ಬಂತೆಂದರೆ ಕೆಸರು ಗದ್ದೆಯಂತಾಗಿ ನರಕ ಸದೃಶ ವಾತಾವರಣ ನಿರ್ಮಾಣವಾಗುತ್ತದೆ ಎಂಬುದಾಗಿ ಚಂದ್ರಾ ಲೇ ಔಟ್ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನಮ್ಮ ಚಂದ್ರಾ ಲೇ ಔಟ್ ರಸ್ತೆ ಒತ್ತುವರಿ ತೆರವು ಮಾಡಿಸಿಕೊಡಲು ಜಿಲ್ಲಾಧಿಕಾರಿ ಆದೇಶ, ಜಿಲ್ಲಾ ಉಸ್ತುವಾರಿ ಸಚಿವರ ಪತ್ರ, ಲೋಕೋಪಯೋಗಿ ಸಚಿವರ ಪತ್ರ, ಮುಖ್ಯಮಂತ್ರಿಗಳ ಪತ್ರ ಕೊಟ್ಟರು ನಗರಸಭೆ ಅಧಿಕಾರಿಗಳು ರಸ್ತೆ ಒತ್ತುವರಿ ತೆರವು ಮಾಡಿಸದೇ ಮೀನಮೇಷ ಎಣಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶ ಇದ್ದಾಗ್ಯೂ ರಸ್ತೆ ಒತ್ತುವರಿ ತೆರವು ಮಾಡಿಸಿಲ್ಲ. ಬಡಾವಣೆ ಅನುಮೋಧಿತ ನಕ್ಷೆಗಳ ಪ್ರಕಾರ 40 ಅಡಿ ರಸ್ತೆ ಇರುವ ಜಾಗದಲ್ಲಿ ಕೇವಲ 10 ಅಡಿ ರಸ್ತೆ ಮಾತ್ರ ಉಳಿದಿದ್ದು, ಅದೂ ಕೂಡ ತಗ್ಗು ಗುಂಡಿಗಳಿಂದ ಕೂಡಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿದು ಹೋಗುತ್ತಿದ್ದು, ಅಸಹ್ಯ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದ್ಧಾರೆ.
ಈಗಾಗಲೇ ಈ ರಸ್ತೆ ವಿಚಾರವಾಗಿ ಕಳೆದ 10 ವರ್ಷಗಳಿಂದ ನಿರಂತರ ಹೋರಾಟ ಮಾಡಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಯುಕ್ತ ಮುಂಬರುವ ದಿನಗಳಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರೇ ಗೆದ್ದರೂ ಮೊದಲು ಡಾಗ್ ಸರ್ಕಲ್ ರಸ್ತೆ ಒತ್ತುವರಿ ತೆರವು ಮಾಡಿಸಿ, ಸದರಿ ರಸ್ತೆ ಅಭಿವೃದ್ಧಿಪಡಿಸಿಕೊಡಬೇಕೆಂದು ಎಸ್.ವಿ.ರಂಗನಾಥ್ ಈ ಮೂಲಕ ಮನವಿ ಮಾಡಿದ್ದಾರೆ.
