
ಹಿರಿಯೂರು :
ವಾಣಿ ವಿಲಾಸ ಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರು ಮದ್ಯದ ಅಮಲಿನಲ್ಲಿ ನೀರಿನಲ್ಲಿ ಅಪಾಯಕಾರಿ ರೀತಿಯಲ್ಲಿ ಚೆಲ್ಲಾಟವಾಡುತ್ತಿರುವುದು ಕಂಡುಬರುತ್ತಿದೆ. ಇದು ಕೇವಲ ಅವರ ಪ್ರಾಣಕ್ಕೆ ಮಾತ್ರವಲ್ಲದೆ, ಜಲಾಶಯದ ಪಾವಿತ್ರ್ಯತೆ ಮತ್ತು ಇತರ ಪ್ರವಾಸಿಗರ ಸುರಕ್ಷತೆಗೂ ಧಕ್ಕೆ ತರುತ್ತಿದೆ ಎಂಬುದಾಗಿ ಪವರ್ ಫೋಕಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ತಿಳಿಸಿದ್ದಾರೆ.

ಆದ್ದರಿಂದ, ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು, ಜಲಾಶಯದ ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಗಸ್ತನ್ನು ಚುರುಕುಗೊಳಿಸಬೇಕು. ಮದ್ಯಪಾನ ಮಾಡಿ ನೀರಿಗೆ ಇಳಿಯುವವರ ಮೇಲೆ ನಿರಂತರ ನಿಗಾ ಇಡಬೇಕು ಮತ್ತು ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಬೇಕು.

ಅಪಾಯಕಾರಿ ವಲಯಗಳಲ್ಲಿ ಸ್ಪಷ್ಟವಾದ ಎಚ್ಚರಿಕೆ ಮತ್ತು ಸೂಚನಾ ಫಲಕಗಳನ್ನು ಅಳವಡಿಸಬೇಕು.ಜೀವ ಅತ್ಯಂತ ಅಮೂಲ್ಯವಾದುದು, ದುರ್ಘಟನೆಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ವಾಣಿ ವಿಲಾಸ ಸಾಗರ ಜಲಾಶಯದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಬೇಕೆಂದು ಪವರ್ ಫೋಕಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಈ ಮೂಲಕ ಆಗ್ರಹಿಸಿದ್ದಾರೆ.
