
ಹಿರಿಯೂರು :
ಯುವಜನತೆ ಎಷ್ಟು ಬಾರಿ ರಕ್ತದಾನ ಮಾಡಿದರೂ ಅತಿಶೀಘ್ರವಾಗಿ ಅವರಲ್ಲಿ ರಕ್ತವೃದ್ಧಿಯಾಗುತ್ತದೆ, ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಂಡು ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡಬಹುದು ಎಂಬುದಾಗಿ ಪೋರ್ಟ್ ಸಿಟಿ ಹೆಲ್ತ್ ಕೇರ್ ಸೊಸೈಟಿ ಜಿಲ್ಲಾ ವಾಸವಿ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಟಿ.ಕೆ.ಶ್ರೀನಿವಾಸ್ ಶೆಟ್ಟಿ ಹೇಳಿದರು.
ನಗರದ ಕನ್ನಿಕಾ ಮಹಲ್ ನಲ್ಲಿ ವಾಸವಿ ಜಯಂತಿಯ ಪ್ರಯುಕ್ತ ಆರ್ಯವೈಶ್ಯಮಂಡಳಿ, ವಾಸವಿ ಅದೃಷ್ಟನಿಧಿ ಬಳಗ ಹಾಗೂ ವಾಸವಿ ಯುವಜನಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ರಕ್ತದಾನ ಮಹಾದಾನವಾಗಿದ್ದು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ವ್ಯಕ್ತಿಗೆ ನಾವು ಕೊಡುವ ರಕ್ತವು ಸಂಜೀವಿನಿಯಾಗಲಿದ್ದು, ಒಬ್ಬ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸಂತೃಪ್ತಿ ನಮಗೆ ಸಿಗುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯಾವುದೇ ಗೊಂದಲಕ್ಕೆ ಒಳಗಾಗದೇ ರಕ್ತದಾನ ಮಾಡಬೇಕು ಎಂಬುದಾಗಿ ಹೇಳಿದರು.
ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷರಾದ ಕೆ.ವಿ.ಅಮರೇಶ್ ಮಾತನಾಡಿ, ಲಯನ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಕಣ್ಣಿನ ಚಿಕಿತ್ಸೆ, ಮಂಡಿಮೂಳೆ ಚಿಕಿತ್ಸೆ ಶಿಬಿರಗಳನ್ನು ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆಸುತ್ತಿರುವ ಶಿಬಿರಗಳು ಯಶಸ್ವಿಯಾಗಿದ್ದು, ಹಲವಾರು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರಲ್ಲದೆ,

ರಕ್ತದಾನ ಶಿಬಿರ ಅತ್ಯವಶ್ಯಕವಾಗಿದ್ದು, ಕೊರೊನಾ ಸಂದರ್ಭದಲ್ಲಿ ವಾಸವಿ ಅದೃಷ್ಟ ಬಳಗದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಈ ಶಿಬಿರದಲ್ಲಿ ಸುಮಾರು 125 ಜನರು ರಕ್ತದಾನ ಮಾಡಿದ್ದರಿಂದ ಜಿಲ್ಲಾ ರಕ್ತ ನಿಧಿಕೇಂದ್ರದಿಂದ ಪ್ರಶಸ್ತಿಪತ್ರವನ್ನು ಸಹ ನೀಡಿರುತ್ತಾರೆ ಎಂಬುದಾಗಿ ಹೇಳಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಸತ್ಯನಾರಾಯಣ್ ಮಾತನಾಡಿ, ರಕ್ತದಾನ ಶಿಬಿರದಲ್ಲಿ ನಾವು ಕೊಡುವ ರಕ್ತ ಒಬ್ಬ ವ್ಯಕ್ತಿಯ ಪ್ರಾಣವನ್ನು ಕಾಪಾಡುತ್ತದೆ, ಈ ನಿಟ್ಟಿನಲ್ಲಿ ಪ್ರತಿವರ್ಷ ವಾಸವಿ ಜಯಂತಿಯಲ್ಲಿ ರಕ್ತದಾನ ಶಿಬಿರವನ್ನು ನಡೆಸಲು ಅಗತ್ಯವಾದ ಎಲ್ಲಾ ಸಹಕಾರವನ್ನು ನಮ್ಮ ಆರ್ಯವೈಶ್ಯ ಮಂಡಳಿಯ ವತಿಯಿಂದ ನೀಡಲಾಗುತ್ತದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರದ ಆಡಳಿತಾಧಿಕಾರಿ ಉಷಾಶ್ರೀನಿವಾಸ್ ಶೆಟ್ಟಿ, ಮತ್ತು ಸಿಬ್ಬಂದಿವರ್ಗ, ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಪಿ.ವಿ.ನಾಗರಾಜ್, ವಾಸವಿ ಅದೃಷ್ಟ ಬಳಗ ಅಧ್ಯಕ್ಷ ಬಾಲಾಜಿ ಮತ್ತು ತಂಡ, ವಾಸವಿಯುವಜನಸಂಘದ ಅಧ್ಯಕ್ಷರಾದ ಜಗದೀಶ್ ಮತ್ತು ತಂಡ, ಮತ್ತು ಸ್ವಯಂಪ್ರೇರಿತ ರಕ್ತದಾನಿಗಳು ಭಾಗವಹಿಸಿದ್ದರು.
