
ಹಿರಿಯೂರು :
ವಾಣಿವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ರಕ್ಷಣೆಗಾಗಿ 2025-26ನೇ ಜಲ ವರ್ಷದ ಎರಡನೇ ಹದದ ನೀರನ್ನು ಎಪ್ರಿಲ್ 21 ರಿಂದ ಒಟ್ಟು 30 ದಿನಗಳ ಕಾಲ ಹರಿಸಲಾಗುವುದು ಎಂಬುದಾಗಿ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ಅವರು ಆದೇಶಿಸಿದ್ದಾರೆ.
ಪ್ರಸ್ತುತ ನೀರಿನ ಮಟ್ಟ ಜಲಾಶಯದಲ್ಲಿ ಸದ್ಯ 126.30 ಅಡಿಗಳಷ್ಟು ನೀರು ಸಂಗ್ರಹವಿದೆ, ಮುಖ್ಯ ಕಾಲುವೆಗಳ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಮೊದಲು ನೀರು ನೀಡಿ ನಂತರ ಮೇಲ್ಭಾಗದ ಪ್ರದೇಶಗಳಿಗೆ ವಿತರಿಸಲಾಗುವುದು, ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ರೈತರು ನೀರನ್ನು ಅತ್ಯಂತ ಮಿತವ್ಯಯವಾಗಿ ಬಳಸಬೇಕು ಮತ್ತು ಪೋಲು ಮಾಡಬಾರದು ಎಂಬುದಾಗಿ ಅವರು ಸೂಚಿಸಿದ್ದಾರೆ.
ರೈತರು ತಮ್ಮ ಜಮೀನುಗಳಿಗೆ ನಿಗದಿಪಡಿಸಿದ ಸರದಿಯಂತೆ ಹಗಲು ಮತ್ತು ರಾತ್ರಿ ವೇಳೆ ನೀರು ಹರಿಸಿಕೊಳ್ಳಬೇಕು ಒಂದು ವೇಳೆ ನಿಗದಿತ ಸಮಯದಲ್ಲಿ ನೀರು ಪಡೆಯದಿದ್ದರೆ ಪುನಃ ಅವಕಾಶ ನೀಡಲಾಗುವುದಿಲ್ಲ, ತೋಟಗಳಲ್ಲಿ ಯಥೇಚ್ಛವಾಗಿ ನೀರು ನಿಲ್ಲಿಸುವುದು ಅಥವಾ ಬೀಳು ಬಿದ್ದಿರುವ ಜಮೀನುಗಳಿಗೆ ನೀರು ಹರಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ
ನಾಲೆಗಳ ನೀರನ್ನು ಟ್ಯಾಂಕರ್ ಮೂಲಕ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು, ನೀರು ನಿರ್ವಹಣೆಗಾಗಿ ಕಂದಾಯ ಪೊಲೀಸ್ ಜಲಸಂಪನ್ಮೂಲ ಇಲಾಖೆಗಳ ಸಮನ್ವಯದೊಂದಿಗೆ ಬಿಗಿಬಂದೋಬಸ್ತ್ ಕ್ರಮಕೈಗೊಳ್ಳಲಾಗಿದೆ, ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಕಾಪಾಡಲು 144ನೇ ಕಾಲಂ ಜಾರಿಗೊಳಿಸಲಾಗುವುದು.
ಪ್ರತಿಯೊಂದು ತೂಬುಗಳ ಬಳಿ ನೀರಾವರಿ ಸಿಬ್ಬಂದಿಯನ್ನು ಕಾವಲಿಗೆ ನೇಮಿಸಲಾಗಿದ್ದು, ಗೇಟುಗಳನ್ನು ಹಾನಿ ಮಾಡುವುದು ಅಥವಾ ಸಿಬ್ಬಂದಿಗೆ ತೊಂದರೆ ಕೊಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅಚ್ಚುಕಟ್ಟು ಪ್ರದೇಶದಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ತಕ್ಷಣವೇ ನೀರು ನಿಲ್ಲಿಸಲಾಗುವುದು ಎಂಬುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
ವಿಶ್ವೇಶ್ವರ ಜಲ ನಿಗಮದ ಕಾರ್ಯ ಪಾಲಕ ಇಂಜಿನಿಯರ್ ಅವರು ಅಚ್ಚುಕಟ್ಟುದಾರರು ಮತ್ತು ರೈತ ಪ್ರತಿನಿಧಿಗಳು ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಈ ಮೂಲಕ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
