November 5, 2026
000003

ಹಿರಿಯೂರು :

ಮಾಜಿಸಚಿವ ದಿವಂಗತ ಡಿ.ಸುಧಾಕರ್ ಅವರ ಕನಸುಗಳನ್ನು ನನಸು ಮಾಡುವ ಸಂಕಲ್ಪದೊಂದಿಗೆ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕ್ಷೇತ್ರದ ಕೆರೆಗಳನ್ನು ತುಂಬಿಸುವ ಮೂಲಕ ನೀರಾವರಿ, ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು, ರೈತರ ಬದುಕಿಗೆ ಕಾಂಗ್ರೆಸ್ ಸರ್ಕಾರ ನೆರವಾಗಲಿದೆ ಎಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ತಾಲೂಕಿನ ದಿಂಡಾವರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜವಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಕಾಮಗಾರಿಗೆ ಮಂಗಳವಾರದಂದು ಭೂಮಿಪೂಜೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು.

ಹಿರಿಯೂರಿಗೆ ಅಂಟಿಕೊಂಡಿರುವ ಬರದ ತಾಲೂಕು ಎಂಬ ಹಣೆಪಟ್ಟಿಯನ್ನು ದೂರ ಮಾಡುವುದು ತಮ್ಮ ಗುರಿಯಾಗಿದೆ. ದಿವಂಗತ ಸುಧಾಕರ್ ಕ್ಷೇತ್ರದ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಮತ್ತು ಅವರ ಆತ್ಮಕ್ಕೆ ಶಾಂತಿ ದೊರಕಿಸಲು ಅವರು ಕನಸು ಕಂಡ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿದ್ದೇನೆ ಎಂದರಲ್ಲದೆ,

ಈ ಕ್ಷೇತ್ರದಲ್ಲಿ ಸುಧಾಕರ್ ಇಲ್ಲದಿರುವುದು ನನಗೆ ಅತ್ಯಂತ ನೋವು ತಂದಿದೆ, ಆದರೆ ಅವರ ಚಿಂತನೆಗಳು ಆಶಯಗಳು ಜೀವಂತವಾಗಿದ್ದು, ಈನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಈಭಾಗದ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದ್ದು,ಕಾಮಗಾರಿಯ ಗುತ್ತಿಗೆ ಪ್ರಕ್ರಿಯೆ ಆರಂಭವಾಗಿದೆ.

ಕೆರೆಗಳಿಗೆ ನೀರು ಹರಿಸುವುದರಿಂದ ಸುತ್ತಮುತ್ತಲಿನ ಕೃಷಿಭೂಮಿಯಲ್ಲಿ ಅಂತರ್ಜಲಮಟ್ಟ ಹೆಚ್ಚಲಿದೆ, ರೈತನಿಗೆ ಸಂಬಳ ಪಿಂಚಣಿ ಪ್ರಮೋಷನ್ ಅಥವಾ ನಿವೃತ್ತಿ ಸೌಲಭ್ಯಗಳಿಲ್ಲ ಆದ್ದರಿಂದ ಅನ್ನದಾತನಿಗೆ ಜೀವದಾನ ನೀಡುವುದು ನಮ್ಮ ಕರ್ತವ್ಯ, ನಾವು ಕೇವಲ ಭರವಸೆ ನೀಡುವುದಿಲ್ಲ ರೈತರ ಹೊಲಗಳಿಗೆ ನೀರು ಹರಿಸುವುದು ತಮ್ಮ ಬದುಕು ಸಮೃದ್ಧಗೊಳಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಪೌರಾಡಳಿತ ಸಚಿವ ಸಿ.ಬಾಲಕೃಷ್ಣ, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ, ಸಣ್ಣ ನೀರಾವರಿ ಸಚಿವ ಅಜಯ್ ಸಿಂಗ್, ಮುಜರಾಯಿ ಖಾತೆ ಸಚಿವ ಬಸವಂತಪ್ಪ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹಾಗೂ ಎಂ.ಎಲ್.ಸಿ ಡಿ.ಟಿ.ಶ್ರೀನಿವಾಸ್, ಮಾಜಿಸಚಿವ ಹೆಚ್.ಆಂಜನೇಯ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಜಿ.ಪಂ.ಮಾಜಿಸದಸ್ಯ ನಾಗೇಂದ್ರನಾಯ್ಕ, ಮುಖಂಡರುಗಳಾದ ಖಾದಿರಮೇಶ್, ಈರಲಿಂಗೇಗೌಡ, ಸುಹಾಸ್ ಸುಧಾಕರ್, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *