
ಹಿರಿಯೂರು :
ನಾನು ಕೇವಲ ಮಾತುಕೊಟ್ಟು ಹೋಗುವವನಲ್ಲ, ನಾನು ಖಾಲಿ ಮಾತು ಆಡುವುದಿಲ್ಲ, ನಾನು ಮತ್ತು ನಮ್ಮ ಸಚಿವರುಗಳು ಹಿರಿಯೂರು ಕ್ಷೇತ್ರಕ್ಕೆ ಬರಿಗೈಯಲ್ಲಿ ಬಂದಿಲ್ಲ, ಹಿರಿಯೂರು ತಾಲ್ಲೂಕಿಗೆ ಅಭಿವೃದ್ಧಿಯ ಲಕ್ಷ್ಮಿಯನ್ನು ಸಹ ನಮ್ಮೊಂದಿಗೆ ಕರೆತಂದಿದ್ದೇವೆ ಎಂಬುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ಧರ್ಮಪುರ ಗ್ರಾಮದಲ್ಲಿ ಮಂಗಳವಾರದಂದು ಕೆ.ಎಸ್.ಆರ್.ಟಿ.ಸಿ ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು.
ಸುಮಾರು 2200ಕೋಟಿ ರೂಗಳ ಮೊತ್ತದ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸಲು ಆದೇಶ ಹೊರಡಿಸಿದ್ದೇವೆ, ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರಖಂಡ್ರೆ ಕ್ಷೇತ್ರದಲ್ಲಿ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ, ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲಾ ಜಾತಿಸಮುದಾಯಗಳ ಸಮುದಾಯಭವನ ನಿರ್ಮಿಸಲು ಆದೇಶ ನೀಡಲಾಗಿದೆ ಎಂದರಲ್ಲದೆ,

ನಾವು ಈಗಾಗಲೇ ಒಕ್ಕಲಿಗರ ಸಮುದಾಯ ಭವನಕ್ಕೆ 5 ಕೋಟಿ ರೂಗಳ ಅನುದಾನಕ್ಕೆ ಮಂಜೂರಾತಿ ನೀಡಿದ್ದೇವೆ, ಗೊಲ್ಲರ ಸಮುದಾಯ ಭವನ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು ಈ ಸರ್ಕಾರಕ್ಕೆ ನೀವು ಶಕ್ತಿ ತುಂಬಬೇಕು ಎಂಬುದಾಗಿ ಮನವಿ ಮಾಡಿದರು.
ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ, ನಿಮ್ಮ ಜಮೀನಿಗೆ ನೀರು ಒದಗಿಸಬೇಕು ಎಂದು ಸುಧಾಕರ್ ಅವರು ಮಾತು ಕೊಟ್ಟಿದ್ದರು. ಜಯಚಂದ್ರ ಅವರು ನಿಮ್ಮ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡು ನೀರಾವರಿ ಸೌಲಭ್ಯ ಕಲ್ಪಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ, ಆಂಜನೇಯ ಅವರು ಈ ಜಿಲ್ಲೆಗೆ ಜನರ ಜೀವನಮಟ್ಟ ಸುಧಾರಣೆಗೆ ಶ್ರಮಿಸುತ್ತಿದ್ದಾರೆ ಎಂಬುದಾಗಿ ಶ್ಲಾಘಿಸಿದರು.

ಸುಮಾರು 3.5 ಕೋಟಿ ರೂಗಳ ವೆಚ್ಚದ ಧರ್ಮಪುರ ಬಸ್ ನಿಲ್ದಾಣ ಕಾಮಗಾರಿಗೆ ಇದೀಗ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇವೆ, ನಿಮ್ಮ ತಾಲೂಕಿನ ನೀರಾವರಿ ಯೋಜನೆ ಬೇಡಿಕೆಗೆ ಮಂಜೂರಾತಿ ನೀಡಿ, ಟೆಂಡರ್ ಕರೆದು ಈಗಾಗಲೇ ಪರೀಕ್ಷಾರ್ಥವಾಗಿ ನೀರು ಸಹ ಹರಿಸಲಾಗಿದೆ ಎಂಬುದಾಗಿ ಅವರು ಹೇಳಿದರಲ್ಲದೆ,
ಈ ಕ್ಷೇತ್ರಕ್ಕಾಗಿ ಕೆಲಸ ಮಾಡಿದ ನನ್ನ ಸ್ನೇಹಿತ ಸುಧಾಕರ್ ಅವರಿಗೆ ಜನ ಉಪಕಾರ ಸ್ಮರಣೆ ಹೊಂದಿದ್ದಾರೆ ಈ ಹೋಬಳಿಯ ಜನ 6,000 ಮತ ನೀಡಿ ಗೆಲ್ಲಿಸಿದ್ದೀರಿ, ಆತನ ಸ್ನೇಹಿತ ನಾನು ಸಿಎಂ ಆಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ನೀವು ಈ ಉಪಚುನಾವಣೆಯಲ್ಲಿ ಈ ಹೋಬಳಿಯಿಂದ ಕನಿಷ್ಠ 15000 ಮತಗಳನ್ನಾದರೂ ನೀಡಬೇಕು ಎಂಬುದಾಗಿ ಕೋರಿದರು.

ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಡಿ.ಟಿ.ಶ್ರೀನಿವಾಸ್ ನಿಮ್ಮ ಮುಂದ್ದಿದ್ದು, ನಾನು ಮತ್ತು ಪೂರ್ಣಿಮಾ ಅವರ ತಂದೆ ಒಟ್ಟಾಗಿ ಕೆಲಸ ಮಾಡಿದವರು, ಹಿರಿಯೂರಿನಲ್ಲಿ ಜನರ ವಿಶ್ವಾಸಗಳಿಸಿ ಕೆಲಸ ಮಾಡಿದ್ದಾರೆ, ಹಿಂದೆಬೇರೆಪಕ್ಷದಿಂದ ಸ್ಪರ್ಧಿಸಿದ್ದರೂ ಈರಾಜ್ಯಕ್ಕೆ ಭವಿಷ್ಯವಿರುವುದು ಕಾಂಗ್ರೆಸ್ ನಿಂದ ಮಾತ್ರ ಎಂದರಿತು, ಕಾಂಗ್ರೆಸ್ ಪಕ್ಷಕ್ಕೆ ಸೇರಿ ನಿಮ್ಮಸೇವೆ ಮಾಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಪೌರಾಡಳಿತ ಸಚಿವ ಸಿ.ಬಾಲಕೃಷ್ಣ, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ, ಸಣ್ಣ ನೀರಾವರಿ ಸಚಿವ ಅಜಯ್ ಸಿಂಗ್, ಮುಜರಾಯಿ ಖಾತೆ ಸಚಿವ ಬಸವಂತಪ್ಪ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹಾಗೂ ಎಂ.ಎಲ್.ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿ.ಪಂ.ಮಾಜಿಸದಸ್ಯ ನಾಗೇಂದ್ರನಾಯ್ಕ, ಕಾಂಗ್ರೆಸ್ ಮುಖಂಡರುಗಳಾದ ಖಾದಿರಮೇಶ್, ಈರಲಿಂಗೇಗೌಡ, ಸುಹಾಸ್ ಸುಧಾಕರ್, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
