October 7, 2026
0003

ಹಿರಿಯೂರು:

ಹೈನುಗಾರಿಕೆ, ಕೃಷಿ, ಭೂ ಅಭಿವೃದ್ಧಿ ಸಾಲ ಟ್ರ್ಯಾಕ್ಟರ್ ಸಾಲಗಳಿಗೆ ಕೇವಲ ಶೇ.3ರಷ್ಟು ಸಾಲ ಸೌಲಭ್ಯಗಳಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಎಸ್.ಸಾದತ್ ವುಲ್ಲಾ ಹೇಳಿದರು.

ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೇತನಾಧರಿತ ಸಾಲ, ಗೋಲ್ಡ್ ಸಾಲ, ಕಾರು ಸೇರಿ ವಾಣಿಜ್ಯ ವಾಹನಗಳ ಸಾಲಗಳನ್ನು ನೀಡಲಾಗುತ್ತಿದ್ದು, ಈ ಮಹತ್ವದ ಯೋಜನೆಗಳನ್ನು ಷೇರುದಾರ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ಸಂಘದ ಅಧ್ಯಕ್ಷರಾದ ಪಿ.ಎಸ್. ಸಾದತ್‌ವುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೆ.19ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಚಿತ್ರದುರ್ಗ ಇದರ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯೂರು ಸಂಘದ ಪರವಾಗಿ ಭಾಗವಹಿಸಲು ಹಾಗೂ ಮತ ಚಲಾಯಿಸಲು ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿ.ಹೆಂಜಾರಪ್ಪ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ಸಭೆಗೆ ಹಿರಿಯೂರು ನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸಿ.ಹೆಂಜಾರಪ್ಪ ಇವರು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಗಳಿಗೆ ಮತ್ತೊಬ್ಬ ನಿರ್ದೇಶಕರನ್ನು ಆಯ್ಕೆ ಮಾಡಬೇಕು ಎಂದು ಸಂಘದ ನಿರ್ದೇಶಕ ಹೆಚ್.ಎನ್ ವೆಂಕಟೇಶ್  ಅವರು ಅಧ್ಯಕ್ಷರಾದ ಪಿ.ಎಸ್. ಸಾದತ್ ವುಲ್ಲಾ ಅವರ ಗಮನಕ್ಕೆ ತಂದರು.

ಇದೇ ಸಂದರ್ಭದಲ್ಲಿ ಮುಂಬರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭೆಗೆ ನಮ್ಮ ಸಂಘದ ವತಿಯಿಂದ ಬೇರೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.ಮಹತ್ವದ ಈ ಸಭೆಗೆ ಒಟ್ಟು 10 ಸದಸ್ಯರು ಹಾಜರಿದ್ದು, 2 ಸದಸ್ಯರು ಗೈರುಹಾಜರಾಗಿದ್ದರು.

ಸಂಘದ ನಿರ್ದೇಶಕರಾದ ಸಿ.ಹೆಂಜಾರಪ್ಪ ಅವರನ್ನು ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಸಭೆಯಲ್ಲಿ ಭಾಗವಹಿಸಿ ರೈತರ ಪರ ಧ್ವನಿ ಎತ್ತಬೇಕು ಎಂದು ಅಧ್ಯಕ್ಷರಾದ ಸಾದತ್ ವುಲ್ಲಾ ಹೇಳಿದರು. ಸದರಿ ಪ್ರತಿನಿಧಿಯು ಸಂಘದ ಯಾವುದೇ ರೀತಿಯ ಸಾಲದ ಬಾಕಿ ಅಥವಾ ಸುಸ್ತಿದಾರರಾಗಿರುವುದಿಲ್ಲ ಹಾಗೂ ಸಹಕಾರ ಸಂಘಗಳ ಕಾಯ್ದೆ ಕಲಂ 20ರ ಅಡಿಯಲ್ಲಿ ಯಾವುದೇ ಅನರ್ಹತೆಗೆ ಒಳಪಟ್ಟಿರುವುದಿಲ್ಲ ಎಂದು ಸಂಘದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದೃಢೀಕರಿಸಿದ್ದಾರೆ.

ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಎನ್.ಪ್ರಕಾಶ್ ಕುಮಾರ್, ನಿರ್ದೇಶಕರಾದ ಎನ್.ಗುರುಸ್ವಾಮಿ, ಎನ್.ಸುಬ್ರಮಣಿ, ಸಿ.ಹೆಂಜಾರಪ್ಪ, ಬೈ.ಎಸ್ ಉಮಾಶಂಕರ್, ಕೆ.ವಿ.ಗೌರಮ್ಮ, ನಾಗರತ್ನಮ್ಮ, ಷೇರುದಾರ ರಂಗೇನಹಳ್ಳಿ ಗೋವಿಂದರಾಜ್ ಹಾಗೂ ಸಂಘದ ಕಾರ್ಯದರ್ಶಿ ಡಿ.ಯಶವಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *