
ಹಿರಿಯೂರು :
ಆಧುನಿಕ ಜಗತ್ತಿನಲ್ಲಿ ಐಶಾರಾಮಿ ಜೀವನ ಹಾಗೂ ಹಣದ ವ್ಯಾಮೋಹದ ಕಾರಣಗಳಿಂದ, ಇಂದಿನ ಯುವಜನಾಂಗ ಮಾದಕ ವಸ್ತುಗಳು, ಮದ್ಯಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಸಾಹಿತಿ ಎಂ.ಜಿ.ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಸಿದ್ಧನಾಯಕ ಸರ್ಕಲ್ ಬಳಿಯ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 157ನೇ ಜಯಂತಿಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಡಾ.ವೀರೇಂದ್ರಹೆಗಡೆಯವರು ಧರ್ಮಸ್ಥಳದ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಗಾಂಧೀಜಿ ಆಶಯವಾಗಿದ್ದ ಗ್ರಾಮಸ್ವರಾಜ್ಯ, ರಾಮರಾಜ್ಯ ಪರಿಕಲ್ಪನೆ ಸ್ವಚ್ಛತೆಯ ಪರ ಮತ್ತು ಮಾದಕ ವ್ಯಸನಗಳ ವಿರುದ್ಧ ಜಾಗೃತಿಯ ಕಾರ್ಯಗಳ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ, ಸರ್ವಧರ್ಮ ಸಮನ್ವಯದ ಐಕ್ಯತೆ ಸೌಹಾರ್ದತೆ ಮೂಲಕ ಮಹಿಳೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸುಧಾರಣೆಗೆ ಮಹತ್ವ ನೀಡಿದ್ದಾರೆ.
ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸಿದ್ದು, ಹಲವಾರು ಕಾರಣಗಳಿಂದ ದುಶ್ಚಟಗಳು ಸಾಮಾಜಿಕವಾಗಿ ಅವರನ್ನು ವ್ಯಾಪಿಸಿಕೊಂಡಿವೆ. ಗಾಂಧೀಜಿ ಅನುಸರಿಸಿದ ತತ್ವ, ಅಹಿಂಸೆಯ ಮಾರ್ಗ, ಸತ್ಯದ ಹಾದಿಗಳು ಮುಚ್ಚಲ್ಪಡುವ ಹಂತದಲ್ಲಿವೆ, ಈ ಹಂತದಲ್ಲಿ ಗಾಂಧೀಜಿಯವರನ್ನು ಸ್ಮರಿಸಬೇಕಿದೆ ಎಂದರು.
ಸ್ವತಂತ್ರ ಪೂರ್ವದಲ್ಲಿ ದುಶ್ಚಟಗಳ ವಿರುದ್ಧ ಗಾಂಧೀಜಿ ಧ್ವನಿ ಮೊಳಗಿಸಿದ್ದರು, ಆದರೆ ಇಂದು ಸಮಾಜದಲ್ಲಿ ಹೇರಳವಾಗಿ ಲಭ್ಯವಿರುವ ದುಶ್ಚಟಗಳು ಯುವಕರು ಮಕ್ಕಳು ವಯಸ್ಕರಲ್ಲಯೂ ವಿಸ್ತರಣೆಯಾಗಿವೆ ಇದರಿಂದ ಭವಿಷ್ಯದಲ್ಲಿ ಆರೋಗ್ಯದ ಮೇಲಾಗುವ ಪರಿಣಾಮಗಳು ಭಯಾನಕವಾಗಿವೆ ಎಂದರು.
ಈ ಸಂದರ್ಭದಲ್ಲಿ ತ್ರಿಯಂಬಕಮೂರ್ತಿ, ತಿರುಪತಿ, ದಾದಾಪೀರ್, ವಿನಯ್ ಕುಮಾರ್ ಸುವರ್ಣ, ಶಾಂತಕುಮಾರ್, ಕಿರಣ್ ಜೈನ್, ತಿಪ್ಪಮ್ಮ, ನಾಗರಾಜ್, ಎಂ.ಭಾಗ್ಯಲಕ್ಷ್ಮಿ, ಸಂತು, ಅಶ್ವಿನಿ ಇತರರು ಉಪಸ್ಥಿತರಿದ್ದರು.
