October 6, 2026
00002

ಹಿರಿಯೂರು :

ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರಮೋದಿಯವರ ಆಡಳಿತ ಮಾದರಿ ಎಂಬುದು ಎಲ್ಲರೂ  ಒಪ್ಪುವಂತಹ ವಿಷಯ, ಆದರೆ ಕೆಲವರು ತಮ್ಮ ದೊಡ್ಡಸ್ಥಿಕೆ ತೋರಿಸಲು ಮೋದಿ ಅವರನ್ನು ಟೀಕೆ ಮಾಡಿತ್ತಾ, ನಾವೇ ಶ್ರೇಷ್ಠರೆಂಬ ಭ್ರಮೆಯಲ್ಲಿದ್ದಾರೆ, ಇದಕ್ಕೆಲ್ಲಾ ಮುಂದೊಂದು ದಿನ ದೇಶದ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂಬುದಾಗಿ ಸಂಸದರಾದ ಗೋವಿಂದ ಕಾರಜೋಳ ಹೇಳಿದರು.

ನಗರದ ವೀನಸ್ ಹಾಲ್ ನಲ್ಲಿ ಗುರುವಾರದಂದು ದೇಶದ ಪ್ರಧಾನಿಗಳಾದ ನರೇಂದ್ರಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ಶ್ರಮಿಕ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಅಸಂಖ್ಯಾತ ಜೀವಿಗಳಿಗೆ ಆಸರೆಯಾಗುವ ರಕ್ತದಾನ ಹಾಗೂ ನಾಡಿನ ನಿರ್ಮಾಣಕ್ಕೆ ಹೆಗಲು ಕೊಡುವ ಶ್ರಮಿಕ ವರ್ಗಕ್ಕೆ ನೆರವು ನೀಡುವ ಮೂಲಕ ಪ್ರಧಾನಿಯವರ ಸೇವಾ ಪರಮೋಧರ್ಮ ತತ್ವವನ್ನು ಸಾಕಾರಗೊಳಿಸುತ್ತಿರುವ ಪಕ್ಷದ ಕಾರ್ಯಕರ್ತರ ಸೇವೆ ಅವಿಸ್ಮರಣೀಯ, ಸಮಾಜದ ಕಟ್ಟಕಡೆಯ ವ್ಯಕ್ತಿ ಸದಾ ಆಡಳಿತದ ಕೇಂದ್ರದಲ್ಲಿರುವುದು ನಾಯಕತ್ವದ ಪ್ರಮುಖ ಗುಣವಾಗಿದ್ದು,

ಮೋದಿಯವರ ನಾಯಕತ್ವ ಸಾರ್ವಜನಿಕರ ಸೇವೆಯಲ್ಲಿನ ಬದ್ಧತೆಹಾಗೂ ದೇಶದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಯಿಂದ ಭಾರತದ ಗೌರವ ವಿಶ್ವಮಟ್ಟದಲ್ಲಿ ಹೆಚ್ಚಿದೆ, ಹೀಗಾಗಿ ವಿಶ್ವದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿ ಮೋದಿ ಗುರುತಿಸಿಕೊಂಡಿದ್ದಾರೆ ಎಂಬುದಾಗಿ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ರಾಜಣ್ಣ ಮಾತನಾಡಿ, ಮೋದಿಯವರಿಗೆ ಅವರೇ ಸರಿಸಾಟಿ, ಅಂತಹ ನಾಯಕರೊಬ್ಬರು ನಮ್ಮ ಪಕ್ಷದಲ್ಲಿರುವುದು ವಿರೋಧ ಪಕ್ಷದವರಲ್ಲಿ ಮತ್ಸರ ಹುಟ್ಟಿಸಿದೆ, 2014ಕ್ಕಿಂತ ಮುಂಚೆ ದೇಶದ ಅಭಿವೃದ್ಧಿ ಹೇಗಿತ್ತು, ನಂತರ ಅಭಿವೃದ್ಧಿ ಹೇಗೆ ನಡೆದಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು,

ಪ್ರಧಾನಿ ಅವರ ಜನ್ಮದಿನದ ಪ್ರಯುಕ್ತ ನಡೆಯುವ ಸೇವಾ ಸಂಕಲ್ಪ ಅಭಿಯಾನದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಗವಂತನು ಆರೋಗ್ಯ-ಆಯಸ್ಸು, ಯಶಸ್ಸನ್ನು  ಕೊಟ್ಟು ಕಾಪಾಡಲಿ ಎಂಬುದಾಗಿ ಹೇಳಿದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್ ಮಾತನಾಡಿ, ಪ್ರಧಾನಿಯವರ ಜನಧನ ಯೋಜನೆ, ಕೃಷಿ ಸಮ್ಮಾನ್, ಉಜ್ವಲ ಯೋಜನೆ, ಮೇಕ್ ಇನ್ ಇಂಡಿಯಾ, ಪಿಎಂ ಗತಿಶಕ್ತಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ ಒಳಗೊಂಡಂತೆ ಅನೇಕ ಜನಪರ ಯೋಜನೆಗಳು ಬಡವರನ್ನು ಆರ್ಥಿಕ ಸಬಲೀಕರಣದತ್ತ ತರಲು ನೆರವಾಗಿವೆ. ಮೋದಿಯವರ ಆಡಳಿತದ ವೈಖರಿಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಮೆಚ್ಚಿವೆ, ಹೀಗಾಗಿ ಅವರು ನಮ್ಮ ದೇಶಕ್ಕೆ ಮಾತ್ರ ಪ್ರಧಾನಿ ಅಲ್ಲ, ವಿಶ್ವಕ್ಕೆ ಪ್ರಧಾನಿ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಅವರ ಜನ್ಮದಿನದ ಅಂಗವಾಗಿ ರಾಜಣ್ಣರವರ ನೇತೃತ್ವದಲ್ಲಿ ನಗರದ ಸಾರ್ವಜನಿಕರಿಗೆ ಒಂದು ಲಕ್ಷ ಲಾಡು ವಿತರಿಸಲಾಯಿತು. ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ಎ.ಮುರಳಿ, ಎನ್.ಆರ್.ಲಕ್ಷ್ಮಿಕಾಂತ್, ಜೆಡಿಎಸ್ ನ ಹನುಮಂತರಾಯಪ್ಪ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮುಖಂಡರುಗಳಾದ ದ್ಯಾಮೇಗೌಡ, ಹನುಮಂತೇಗೌಡ, ವಿಶ್ವನಾಥ,ರಾಜು, ಬಸವರಾಜ ನಾಯಕ, ಎಂ.ಎಸ್.ರಾಘವೇಂದ್ರ, ಎ.ರಾಘವೇಂದ್ರ, ಎಸ್.ಎಲ್.ಎನ್.ಎಸ್. ವೆಂಕಟೇಶ್, ಚಂದ್ರಹಾಸ್, ಎಂ.ವಿ.ಹರ್ಷ, ಯೋಗೇಶ್, ನಿತಿನ್ ಗೌಡ, ಮಂಜುನಾಥ್, ಸಿದ್ದಮ್ಮ, ನಾಗರಾಜ್, ಮಂಜುಳಮ್ಮ, ಹಮಾಲರ ಸಂಘದ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *