
ಹಿರಿಯೂರು :
ರೈತರ ಕಣ್ಣೀರಿನ ಶಾಪ ಸರ್ಕಾರಕ್ಕೆ ತಟ್ಟದೇ ಬಿಡಲ್ಲ, ರೈತನನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿದಿಲ್ಲ, ರಾಜ್ಯದಲ್ಲಿ 3500 ರೈತರ ಆತ್ಮಹತ್ಯೆಗೆ ಸರ್ಕಾರವೇ ಕಾರಣ ಎಂಬುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ರಾದ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ತಾಲೂಕಿಗೆ ಶನಿವಾರ ಭೇಟಿ ನೀಡಿ, ಜವನಗೊಂಡನಹಳ್ಳಿ, ಕೆಆರ್ ಹಳ್ಳಿ, ಪಿಟ್ಲಾಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಅವರ ತೆಂಗಿನ ತೋಟ ಹಾಗೂ ಬೆಳೆ ಹಾನಿ ವೀಕ್ಷಿಸಿ, ಬಳಿಕ ನಡೆದ ಸ್ವಾಭಿಮಾನ ಯಾತ್ರೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಬಿರು ಬಿಸಿಲಿನಲ್ಲೂ ಲೆಕ್ಕಿಸದೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಹಿರಿಯೂರು ಬೈಪಾಸ್ ನಿಂದ ಗಾಂಧೀವೃತ್ತ ಹಾಗೂ ನೆಹರು ಮಾರುಕಟ್ಟೆ ಮಾರ್ಗವಾಗಿ ತಾಲೂಕು ಕಚೇರಿಗೆ ಪಾದಯಾತ್ರೆ ನಡೆಸಿದರು.
ರಾಜ್ಯದಲ್ಲಿ ಬರಗಾಲದ ಸಂಕಷ್ಟದಲ್ಲಿ ನಾವು ಸಿಲುಕಿದ್ದೇವೆ, ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಜೊತೆ ನಿಂತು ಅವರ ಕಷ್ಟ ಆಲಿಸಬೇಕಿತ್ತು, ಆದರೆ ರೈತರ ಕಣ್ಣೀರು ಒರೆಸುವ ಬದಲು ಸರ್ಕಾರ ರೈತರನ್ನೇ ಬೀದಿಗೆ ತಳ್ಳಿದೆ, ನಮ್ಮದು ರಾಜಕೀಯ ಲಾಭ ನಷ್ಟದ ಹೋರಾಟ ಅಲ್ಲ ಇದು ರೈತರ ಬದುಕು ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿದೆ.

ಅಲ್ಲದೆ ರಾಜ್ಯ ಸರ್ಕಾರ ಬರ ಪರಿಹಾರವಾಗಿ ಎಕರೆಗೆ 2500 ರೂ ಕೊಡುತ್ತಿದೆ, ನೀವು ಕೊಡುವ 2500ರೂ ಭಿಕ್ಷೆಯಲ್ಲಿ ರೈತ ಬದುಕುತ್ತಾನಾ, ರೈತ ಭಿಕ್ಷುಕ ಅಲ್ಪ, ರೈತರಿಗೂ ಸ್ವಾಭಿಮಾನ ಇದೆ ರೈತ ರೈತರ ಸ್ವಾಭಿಮಾನವನ್ನು ಕೆಣಕಬೇಡಿ ರೈತರನ್ನು ಎದುರು ಹಾಕಿಕೊಂಡ ಯಾವ ಸರ್ಕಾರವು ಉಳಿದಿಲ್ಲ ಎಂದು ಗುಡುಗಿದರು.
ಇದು ಅನಿರೀಕ್ಷಿತವಾಗಿ ಬಂದ ಉಪಚುನಾವಣೆ ಈ ಉಪಚುನಾವಣೆಗಾಗಿ ಪ್ರತಿ ತಾಲೂಕಿಗೆ ಒಬ್ಬೊಬ್ಬ ಸಚಿವರನ್ನು ನೇಮಕ ಮಾಡಿದ್ದಾರೆ, ಬಣ್ಣಬಣ್ಣದ ಮಾತು ಹೇಳುವವರನ್ನು ನಂಬಬೇಡಿ, ಈ ಲೂಟಿಕೋರರಿಗೆ ಈ ರಾಜ್ಯದ ಖಜಾನೆ ಕೀಲಿ ಕೈ ಕೊಟ್ಟಿದ್ದೀರಾ ಎಂಬುದಾಗಿ ಜನರು ಪ್ರಶ್ನಿಸಬೇಕು, ಈ ಉಪಚುನಾವಣೆ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ತಾಲೂಕು ಘಟಕದ ಅಧ್ಯಕ್ಷ ಹನುಮಂತರಾಯಪ್ಪ, ರೈತರ ಘಟಕದ ಅಧ್ಯಕ್ಷ ಕಸವನಹಳ್ಳಿ ರಮೇಶ್, ಮುಖಂಡರಾದ ರವೀಂದ್ರಪ್ಪ, ಮಂಜಣ್ಣ, ಯಶೋಧರ, ಶಿವಣ್ಣಚಿಲ್ಲಹಳ್ಳಿ, ಶಂಕರಮೂರ್ತಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಅಭಿನಂದನ್, ಜಯರಾಮಯ್ಯ, ಶಿವಪ್ರಸಾದ್, ರೈತ ಮುಖಂಡರಾದ ರಂಗನಾಥ್, ಶಿವಕುಮಾರ್, ಚೌಡರೆಡ್ಡಿ ತೂಪಲ್ಲಿ ಇತರರು ಉಪಸ್ಥಿತರಿದ್ದರು.
