
ಹಿರಿಯೂರು :
ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘವು ಪ್ರಸ್ತುತ ಹಣಕಾಸು ವರ್ಷದಲ್ಲಿ ಒಂದು ಕೋಟಿಯವರೆಗೆ ರಸಗೊಬ್ಬರ ಮಾರಾಟ ಮಾಡಿದ್ದು, ಪ್ರಸ್ತುತ 2025-26ನೇ ಸಾಲಿನಲ್ಲಿ 1.22 ಲಕ್ಷ ರೂಗಳ ನಿವ್ವಳ ಲಾಭವನ್ನು ಗಳಿಸಿದೆ ಎಂಬುದಾಗಿ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಶ್ರವಣಗೆರೆ ಹನುಮಂತರಾಯ ಹೇಳಿದರು.
ನಗರದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸದಸ್ಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನವದೆಹಲಿಯಲ್ಲಿರುವ ಹಿಪ್ಕೋ ಸಂಸ್ಥೆಯಲ್ಲಿ ರೂಪಾಯಿ 10 ಲಕ್ಷ ಷೇರು ಮೊತ್ತ ಹಾಕಿದ್ದು, ಇದರಿಂದ ವಾರ್ಷಿಕ ಎರಡು ಲಕ್ಷ ಡಿವಿಡೆಂಟ್ ಬರುತ್ತಿದೆ, ಇದಲ್ಲದೆ ವಿವಿಧ ಕಡೆ ತೊಡಗಿರುವ ಶೇರು ಹಣದಿಂದ 6 ಲಕ್ಷಕ್ಕೂ ಹೆಚ್ಚು ಡಿವಿಡೆಂಟ್ ಬರುತ್ತಿದೆ. ಇ-ಸ್ಟ್ಯಾಂಪ್ ವಿತರಿಸುವ ಶಾಖೆ ತೆರೆಯಲು ರಾಜ್ಯ ಸಹಕಾರ ಪತ್ತಿನ ಸಹಕಾರ ಸಂಘಗಳ ಮಹಾಮಂಡಳಿಯಲ್ಲಿ 50,000 ಭದ್ರತಾ ಠೇವಣಿ ಇರಿಸಿದ್ದೇವೆ ಎಂಬುದಾಗಿ ತಿಳಿಸಿದರು.
ನಾನು ರಾಜ್ಯ ಸಹಕಾರ ಮಾರಾಟ ಮಂಡಳದ ನಿರ್ದೇಶಕನಾಗಿದ್ದು, ಅಲ್ಲಿಂದ ತಂದಿರುವ 92 ಲಕ್ಷ ರೂಗಳ ಸಹಾಯಧನದಲ್ಲಿ 65 ಲಕ್ಷ ರೂ ಖರ್ಚುಮಾಡಿ, 13 ನೂತನ ಮಳಿಗೆಗಳನ್ನು ಬಾಡಿಗೆ ನೀಡಿದ್ದೇನೆ, ಮೊದಲನೇ ಅಂತಸ್ತಿನಲ್ಲಿ 77 ಲಕ್ಷ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಿಸಲು ತಾಂತ್ರಿಕ ಮಂಜೂರಾತಿ ಹಾಗೂ ಆಡಳಿತಾತ್ಮಿಕ ಅನುಮೋದನೆಗೆ ಸಹಕಾರ ಇಲಾಖೆ ಜಂಟಿ ನಿಬಂಧಕರಿಗೆ ಕಳಿಸಲಾಗಿದೆ.
ಭವಿಷ್ಯದಲ್ಲಿ ಬಾಡಿಗೆ ಹಾಗೂ ವಹಿವಾಟಿನ ಮೂಲಕ ಹೆಚ್ಚಿನ ಲಾಭಾಂಶ ಬರಲಿದೆ ಎಂಬುದಾಗಿ ಹನುಮಂತರಾಯಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅನಿತಾಮಹೇಶ್, ನಿರ್ದೇಶಕರಾದ ಎನ್.ಆರ್.ಲಕ್ಷ್ಮಿಕಾಂತ್, ಟಿ.ಗಿರಿಸ್ವಾಮಿ, ವಿ.ವೀರಣ್ಣ, ಲೋಕೇಶ್ ಗೌಡ, ಜಿ.ತಿಪ್ಪೇಸ್ವಾಮಿ, ಭಾಗ್ಯಮ್ಮ, ಹನುಮಂತರಾಯ, ಎಸ್.ಆರ್.ಶ್ರೀಧರ್, ವಿ.ರಾಮಚಂದ್ರಪ್ಪ, ಸಂಘದ ಸಹಕಾರ್ಯದರ್ಶಿ ಆರ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾಳಿಗೆ ಉಪಸ್ಥಿತರಿದ್ದರು.
