
ಹಿರಿಯೂರು :
ನಾಗರಪಂಚಮಿ ಹಬ್ಬದಲ್ಲಿ ಮೂಢನಂಬಿಕೆಯಿಂದ ಕಲ್ಲಿನ ಹಾವಿಗೆ ಹಾಲೆರೆಯುವ ನಾಗರೀಕರು ಕಲ್ಲಿಗೆ ಹಾಲೆರೆಯುವ ಬದಲು ಪುಟ್ಟ ಮಕ್ಕಳಿಗೆ ಕುಡಿಯಲು ಕೊಟ್ಟರೆ ಮಕ್ಕಳ ಹಸಿವು ನೀಗಿಸಿದಂತಾಗುತ್ತದೆ, ಈ ನಿಟ್ಟಿನಲ್ಲಿ ನಾಗರಪಂಚಮಿಯನ್ನು ಬಸವಪಂಚಮಿಯಾಗಿ ಆಚರಿಸಬೇಕು ಎಂಬುದಾಗಿ ಕರ್ನಾಟಕ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಕೂನಿಕೆರೆ ಮಾರುತೇಶ್ ಕರೆ ನೀಡಿದರು.
ತಾಲ್ಲೂಕಿನ ಕೂನಿಕೇರಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಕನ್ನಡ ಮತ್ತು ಉರ್ದು ಶಾಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಮಾನವ ಬಂಧುತ್ವ ವೇದಿಕೆ ವತಿಯಿಂದ ನಾಗರಪಂಚಮಿಯನ್ನು ಬಸವಪಂಚಮಿಯಾಗಿ ಆಚರಿಸುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮಕ್ಕಳಿಗೆ ಹಾಲು ವಿತರಿಸಿ, ಅವರು ಮಾತನಾಡಿದರು.

ಪ್ರಕೃತಿಯಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ, ಹಾವುಗಳನ್ನು ಕೊಳ್ಳಬಾರದು ಎಂಬ ಕಾರಣಕ್ಕೆ ನಮ್ಮ ಹಿರಿಯರು ಅದಕ್ಕೆ ದೈವತ್ವದ ಸ್ಥಾನ ಕೊಟ್ಟಿದ್ದಾರೆ, ಬಸವಣ್ಣನವರು ವಚನವೊಂದರಲ್ಲಿ ಕಲ್ಲ ನಾಗರ ಕಂಡರೆ ಹಾಲೆರೆವರಯ್ಯ, ದಿಟ್ಟ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂದು ಜನರ ಮನಸ್ಥಿತಿಗೆ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ, ಈ ಮೂಢನಂಬಿಕೆಗಳಿಂದ ಹೊರಬಂದು ನಮ್ಮ ಹಬ್ಬಗಳನ್ನು ಮುಂಬರುವ ದಿನಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬುದಾಗಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
