
ಹಿರಿಯೂರು :
ಇಂದಿನ ಯುವಜನರು ಜಾಗರೂಕರಾಗಿ ಮತ್ತು ಸುರಕ್ಷಿತವಾಗಿರಲು ಕರಾಟೆ ಜ್ಞಾನ ಅತ್ಯಗತ್ಯವಾಗಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸುರಕ್ಷತೆಯ ಭಾವನೆ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಎಂಬುದಾಗಿ ಇನ್ನರ್ವಿಲ್ ಕ್ಲಬ್ ಅಧ್ಯಕ್ಷರಾದ ವೀಣಾ ಸುರೇಶ್ ತಿಳಿಸಿದರು.
ನಗರದ ಎಸ್.ಆರ್.ಪಿ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಇನ್ಹರ್ ವ್ಹೀಲ್ ಕ್ಲಬ್ ಹಿರಿಯೂರು ಇವರ ವತಿಯಿಂದ ಆಯೋಜಿಸಲಾಗಿದ್ದ “ಸ್ವರಕ್ಷಣಾ ತರಬೇತಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳಾ ಸಬಲೀಕರಣ ಕ್ಲಬ್ ನ ಕಾರ್ಯದರ್ಶಿ ನಿರ್ಮಲ ಮಹಾಂತೇಶ್ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ತಮ್ಮ ಸಂಸ್ಥೆ ಬದ್ಧವಾಗಿದ್ದು, “ಸ್ವರಕ್ಷಣಾ ತರಬೇತಿ” ಕಾರ್ಯಕ್ರಮವನ್ನು ಸಂಯೋಜಿಸಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ, ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆಯಿರಿ ಎಂಬುದಾಗಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ನಾಗಣ್ಣ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯುಕ್ತ ಜೀವನ ಕೌಶಲ್ಯಗಳನ್ನು ಒದಗಿಸಿ, ಮಹಿಳೆಯರು ಸುರಕ್ಷತೆ ಕಾಪಾಡಿಕೊಳ್ಳಲು ಹಮ್ಮಿಕೊಂಡಿರುವ ಈ “ಸ್ವರಕ್ಷಣಾ ತರಬೇತಿ” ಕಾರ್ಯಕ್ರಮ ನಿಜಕ್ಕೂ ಉಪಯುಕ್ತ ಕಾರ್ಯಕ್ರಮವಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕರಾಟೆ ಮಾಸ್ಟರ್ ರಂಗನಾಥ್ ಹಾಗೂ ಅವರ ತಂಡದ ಅನುಭವಿ ತರಬೇತುದಾರರುಗಳು ವಿದ್ಯಾರ್ಥಿಗಳಿಗೆ ಅಪಾಯದ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳುವ ತಂತ್ರಗಳು ಮಣಿಕಟ್ಟು ಹಿಡಿತದಿಂದ ಬಿಡುಗಡೆಯಾಗುವ ವಿಧಾನ ಹಾಗೂ ಪರಿಸ್ಥಿತಿಯ ಅರಿವು ಮೂಡಿಸುವ ಪ್ರಾತ್ಯಕ್ಷಿಕೆಗಳ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಇನ್ಹರ್ ವ್ಹೀಲ್ ಕ್ಲಬ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
