
ಹಿರಿಯೂರು :
ಸರಳತೆ, ಮಾನವೀಯತೆ ಹಾಗೂ ಮನುಷ್ಯತ್ವಕ್ಕೆ ಮತ್ತೊಂದು ಹೆಸರೇ ಡಿ.ಸುಧಾಕರ್ ಆಗಿದ್ದು, ಜಿಲ್ಲೆಯಲ್ಲಿ ಜಾತಿಬಲ ಇಲ್ಲದೆ ನೀತಿಬಲದ ಮೂಲಕ ನಾಲ್ಕುಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಗಳಾಗಿ ಅವರು ಮಾಡಿದ ಸೇವೆ ಅನನ್ಯವಾಗಿದೆ ಎಂಬುದಾಗಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ನೆಹರುಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಚಿತ್ರದುರ್ಗ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಹಿರಿಯೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಡಿ.ಸುಧಾಕರ್ ರವರಿಗೆ ಆಯೋಜಿಸಲಾಗಿದ್ದ “ನುಡಿನಮನ” ಕಾರ್ಯಕ್ರಮವನ್ನು ಉದ್ಘಾಟಿಸಿ, ಡಿ.ಸುಧಾಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು.

ಒಬ್ಬ ವ್ಯಕ್ತಿ ಸತ್ತಾಗ ಆಸ್ತಿ, ಸಂಪತ್ತು ಅವರ ಹಿಂದೆ ಬರುವುದಿಲ್ಲ ಅವರು ಮಾಡಿದ ದಾನ,ಧರ್ಮ, ಪ್ರೀತಿ,ಮಮತೆ ಅವರನ್ನು ಕೈ ಹಿಡಿಯುತ್ತದೆ, ಹಣಗಳಿಕೆ ಯಾವತ್ತು ಶಾಶ್ವತವಲ್ಲ,ಜನ ಗಳಿಕೆ ಮಾತ್ರ ಶಾಶ್ವತವಾಗಿರುತ್ತದೆ, ಈ ನಿಟ್ಟಿನಲ್ಲಿ ಡಿ.ಸುಧಾಕರ್ ರವರು ಯಾವಾಗಲೂ ಜನಪರಚಿಂತನೆ ಜನಪದ ಹೋರಾಟ ಜನಪರವಾದ ಕೆಲಸಗಳ ಮಾಡುತ್ತ ಜಿಲ್ಲೆಯಲ್ಲಿ ಸಮಾಜಮುಖಿ ರಾಜಕಾರಣಿಯಾಗಿದ್ದರು.
ಐಮಂಗಳ ಹೋಬಳಿ ಹಾಗೂ ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸಲು 244 ಕೋಟಿ ಹಣವನ್ನು ಆಡಳಿತಾತ್ಮಕವಾಗಿ ಮಂಜೂರು ಮಾಡಲಾಗಿದೆ, ಈ ಕೆಲಸ ಸುಧಾಕರ್ ಅವರ ಕನಸಾಗಿತ್ತು ಅವರು ನನ್ನ ಬಳಿ ಬಹಳಷ್ಟು ಸಲ ಇದರ ಬಗ್ಗೆ ಚರ್ಚೆ ಮಾಡಿದ್ದರು, ಅದರಿಂದ ಅವರ ಕನಸು ನನಸುಮಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಈ ಮಂಜೂರಾತಿ ನೀಡಲಾಗಿದೆ,

ಡಿ.ಸುಧಾಕರ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಭಾರತ್ ಜೋಡೋ ಯಾತ್ರೆಯನ್ನ ಯಶಸ್ವಿಗೊಳಿಸಿದ್ದರು, ಹಾಗೆ ಭದ್ರಾಮೇಲ್ದಂಡೆ ಯೋಜನೆ ಜಾರಿಗೊಳಿಸುವುದು ಅವರ ಒತ್ತಾಸೆಯಾಗಿತ್ತು, ಅದರಂತೆ ಜಿಲ್ಲೆಯ ಆರು ಶಾಸಕರೊಂದಿಗೆ ಒಡನಾಡಿಯಾಗಿ ಜಿಲ್ಲಾ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ, ಎಂದು ಅವರ ಬದುಕಿನ ಘಟನೆಗಳನ್ನು ನೆನಪು ಮಾಡಿಕೊಂಡರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮಾತನಾಡಿ, ಡಿ.ಸುಧಾಕರ್ ಅವರ ಅಗಲಿಕೆ ತುಂಬ ನೋವುಂಟು ಮಾಡಿದ್ದು, ಇದು ತಾಲೂಕಿಗಾಗಲಿ, ಜಿಲ್ಲೆಗಾಗಲಿ ಅಲ್ಲ, ಇಡೀ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ನಷ್ಟ ಉಂಟಾಗಿದೆ, ಸುಧಾಕರ್ ಅವರು ಜಾತ್ಯಾತೀತ, ಕ್ರಿಯಾಶೀಲ, ವ್ಯಕ್ತಿತ್ವದ ಆದರ್ಶ ವ್ಯಕ್ತಿಯಾಗಿದ್ದು, ಅವರು ರಾಜಕೀಯ ಕ್ಷೇತ್ರಕ್ಕೆ ತಮ್ಮದೇ ಆದಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಹಿರಿಯೂರಿಗೆ ಇಂದು ಭಾರವಾದ ಹೃದಯದೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಡಿ.ಸುಧಾಕರ್ ಅವರು ರಾಜಕೀಯ ಕ್ಷೇತ್ರದಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ, ಯಾವುದೇ ಒಬ್ಬ ವ್ಯಕ್ತಿಗೆ ವಯಸ್ಸು ಲೆಕ್ಕವಲ್ಲ ಅವರು ಮಾಡಿದ ಕೆಲಸ, ದಾನ, ಧರ್ಮ, ಸಮಾಜಮುಖಿಚಿಂತನೆ, ಆದರ್ಶಗಳು ಪ್ರಮುಖವಾಗುತ್ತವೆ,
ಈ ನಿಟ್ಟಿನಲ್ಲಿ ಡಿ.ಸುಧಾಕರ್ ಅವರು ಸಾಮಾನ್ಯ ಜನರ ಕಷ್ಟ ಸುಖಗಳಿಗೆ ಸದಾಸ್ಪಂದನೆ ನೀಡುತ್ತಿದ್ದರು, ಜಾತಿಯ ಬಲವಿಲ್ಲದಿದ್ದರೂ ಜನಬಲದಿಂದ ರಾಜಕೀಯ ಸೇವೆ ಮಾಡುತ್ತಾ ಬಂದಿದ್ದರು, ಅವರು ಈ ಭಾಗದ ರೈತರು ಮಕ್ಕಳು ಮಹಿಳೆಯರು ಕಾರ್ಮಿಕರು ದುಡಿಯುವ ವರ್ಗದ ಜೊತೆ ಸದಾ ಒಡನಾಡಿಯಾಗಿದ್ದು, ತಾಲೂಕಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು,

ಮಾಜಿಸಚಿವರಾದ ಎಚ್.ಆಂಜನೇಯ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಡಿ.ಸುಧಾಕರ ಧರ್ಮಪತ್ನಿ ಹರ್ಷಿಣಿ ಸುಧಾಕರ್, ಪುತ್ರ ಸುಹಾಸ್, ಪುತ್ರಿ ಸ್ಪೂರ್ತಿ, ಅಳಿಯನಿತೇಶ್, ಸಹೋದರರಾದ ಡಿ.ಎಸ್.ಕುಮಾರ್, ಸುರೇಶ್, ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಮಹಮ್ಮದ್, ಪಿಡಬ್ಲ್ಯೂಡಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಎಚ್.ವೆಂಕಟೇಶ್, ಮಾಜಿ ಸಚಿವರಾದ ಎಚ್.ಆಂಜನೇಯ, ತನ್ವೀರ್ ಶೇಟ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್, ಬಿ.ಎನ್.ಚಂದ್ರಪ್ಪ, ಮುರಳೀಧರ, ಹಾಲಪ್ಪ, ಜಿಲ್ಲಾ ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಶಿವಣ್ಣ, ಶಕೀಲ್ ನವಾಜ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ಕೆಪಿಸಿಸಿಉಪಾಧ್ಯಕ್ಷರಾದ ಆರ್.ಮಂಜುನಾಥ್, ಮಾಜಿ ಶಾಸಕರಾದ ಪೂರ್ಣಿಮಾಶ್ರೀನಿವಾಸ್, ಎಂ.ಎಲ್.ಸಿ. ಡಿ.ಟಿ.ಶ್ರೀನಿವಾಸ್, ಎಂ.ರಾಮಪ್ಪ, ಪಿ.ಟಿ.ಪರಮೇಶ್ವರನಾಯಕ್, ಹನುಮಲಿ ಷಣ್ಮುಖಪ್ಪ, ಜಯಮ್ಮ ಬಾಲರಾಜ್, ಹಾಲೇಶ್, ಟಿ.ರಘು, ಜಿ.ಜಿ.ಹಟ್ಟಿ ತಿಪ್ಪೇಸ್ವಾಮಿ, ಸಣ್ಣಚಿತ್ತಯ್ಯ, ಅಮೃತೇಶ್ವರಸ್ವಾಮಿ, ಬಿ.ಸಿ.ಪಾಪಣ್ಣ, ಬಿ.ಎಚ್.ಮಂಜುನಾಥ, ಕಂದಿಕೆರೆ ಸುರೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಈರಲಿಂಗೇಗೌಡ, ಕಲ್ಲಟ್ಟಿಹರೀಶ್, ಜಿ.ಎಲ್.ಮೂರ್ತಿ, ಡಾ.ಮಸ್ಕಲ್ ನವೀನ್, ತಾ.ಪಂ.ಮಾಜಿ ಅಧ್ಯಕ್ಷೆ ಡಾ.ಜಿ.ಆರ್.ಸುಜಾತ, ಜಿ.ಪಂ.ಮಾಜಿ ಅಧ್ಯಕ್ಷೆ ಗೀತಾನಂದಿನಿಗೌಡ, ಯತೀಶ್, ಜಿ.ಪಂ.ಮಾಜಿ ಸದಸ್ಯರುಗಳಾದ ಆರ್.ನಾಗೇಂದ್ರನಾಯ್ಕ, ಗೀತಾನಾಗಕುಮಾರ, ಕಾಂಗ್ರೆಸ್ ಯುವಮುಖಂಡರಾದ ಕೋಡಿಹಳ್ಳಿಸಂತೋಷ್, ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿತ್ರನಟ ನಿರ್ದೇಶಕ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾಧುಕೋಕಿಲ ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
