July 29, 2026
00002

ಹಿರಿಯೂರು :

ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕಾಗಿ ನಮ್ಮ ರೋಟರಿ ಸಂಸ್ಥೆಯಿಂದ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಅವರಿಂದ ಉಪನ್ಯಾಸ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ರೋಟರಿ ಅಧ್ಯಕ್ಷರಾದ ಹೆಚ್.ಡಿ.ವಸಂತ್ ಕುಮಾರ್ ಹೇಳಿದರು.

ನಗರದ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆ ಹಿರಿಯೂರು, ರೋಟರಿ ಚಿನ್ಮಲಾದ್ರಿ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಲೇಜು ಮಕ್ಕಳಿಗಾಗಿ “ಉಚಿತ ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಮೊದಲ ಗೋಷ್ಠಿ ಸಂಪನ್ಮೂಲ ವ್ಯಕ್ತಿಗಳಾದ ಶಶಿಧರ್ ರಾವ್ ಮಾತನಾಡಿ,  ಕೃತಕ ಬುದ್ಧಿಮತ್ತೆ ಬಳಕೆಯನ್ನು ಯಾವ ಯಾವ ಕ್ಷೇತ್ರದಲ್ಲಿ ಜಾರಿಗೆ ತರಬೇಕೆಂದು ಕಾನೂನು ಜಾರಿಗೆ ರೂಪಿಸಬೇಕು, ಮನುಷ್ಯ ಮುಂದೆ ಬರುವ ಸವಾಲುಗಳನ್ನು ಎದುರಿಸಲು ಸಿದ್ದರಾಗಬೇಕು ಈ ನಿಟ್ಟಿನಲ್ಲಿ ಮನುಕುಲದ ಭವಿಷ್ಯ ಕುರಿತಂತೆ ಉಪನ್ಯಾಸ ನೀಡಿದರು.

ಎರಡನೇ ಗೋಷ್ಠಿಯಲ್ಲಿ ಮಂಜುನಾಥ್ ಭಾಗವತ್ ಮಾತನಾಡಿ, ನವೀಕರಿಸಬಹುದಾದ ಇಂಧನ ಹಾಗೂ ಭವಿಷ್ಯದ ಇಂಧನ ಬೇಡಿಕೆ ಕುರಿತಂತೆ ಮನೆಮನೆಗಳು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವುದರ ಮೂಲಕ ಆದಾಯ ಗಳಿಸಿಕೊಳ್ಳಿ ಇದಕ್ಕೆ ಕೇಂದ್ರ ಸರ್ಕಾರದ ಸೂರ್ಯಘರ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಸಮಾಜ ಪರಿವರ್ತನೆಯಾದಂತೆ ಹೊಸ ಹೊಸ ಆವಿಷ್ಕಾರಗಳು ಬರುತ್ತಾ ಇರುತ್ತವೆ ಅದಕ್ಕೆ ಯುವಕರು ಸಿದ್ದರಾಗಬೇಕು, ಇಲ್ಲದಿದ್ದರೆ ಆಧುನಿಕ ಜಗತ್ತಿಗೆ ಹೊಂದಿಕೊಂಡು ಬದುಕಲು ಸಾಧ್ಯವಾಗುವುದಿಲ್ಲ ಎಂದರಲ್ಲದೆ,

ಮನುಷ್ಯರಿಗೆ ಉದ್ಯೋಗಗಳು ಇಲ್ಲವಾದರೆ ಅವರು ಸೋಮಾರಿಗಳು ಹಾಗೂ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ಸಮಾಜ ವಿಜ್ಞಾನಿಗಳು ಸಂಶೋಧನೆಯಲ್ಲಿ ಮಗ್ನರಾಗುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸಲು ಚಿಂತನೆ ನಡೆಸಬೇಕು ಎಂಬುದಾಗಿ ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಅಧೀಕ್ಷಕರಾದ ಪಿ.ಎನ್.ನರಸಿಂಹಮೂರ್ತಿ, ರೋಟೇರಿಯನ್ ಗಳಾದ ಎಸ್.ಜೋಗಪ್ಪ, ಸಣ್ಣಭೀಮಣ್ಣ, ದೇವರಾಜಮೂರ್ತಿ, ಮೋಹನ್, ಮೊಹಮ್ಮದ್ ಸಾದತ್, ಐ.ಕ್ಯೂ.ಎ.ಸಿ ಸಂಚಾಲಕರು ಉಪಸ್ಥಿತರಿದ್ದರು.

ಆರಂಭದಲ್ಲಿ ವಿದ್ಯಾರ್ಥಿ ಮಂಜುನಾಥ್ ಪ್ರಾರ್ಥಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಟಿ.ಬಸವರಾಜ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಬಿ.ಟಿ.ಭರತ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ರೋಟರಿ ಕಾರ್ಯದರ್ಶಿ ಚಂದ್ರಹಾಸ್ ವಂದನಾರ್ಪಣೆ ನೆರವೇರಿಸಿದರು.

About The Author

Leave a Reply

Your email address will not be published. Required fields are marked *