July 28, 2026
000000003

ಹಿರಿಯೂರು :

ಸಮಾಜದ ಪ್ರತಿಯೊಬ್ಬ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕಲೆ ಅಡಗಿರುತ್ತದೆ, ಅದನ್ನು ಅನಾವರಣಗೊಳಿಸುವ ಕೆಲಸವನ್ನು ಕುಟುಂಬಸ್ಥರು ಮಾಡಬೇಕು, ಈ ನಿಟ್ಟಿನಲ್ಲಿ ಅವರ ಕಲೆಗೆ ಕುಟುಂಬದವರು ಎಲ್ಲಾ ರೀತಿಯಿಂದಲೂ ಸಹಕಾರ ನೀಡಬೇಕು ಎಂಬುದಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಆಕಾಂಕ್ಷಿ ರಾಜಣ್ಣ ಹೇಳಿದರು.

ನಗರದ ಸಂತೆಮೈದಾನದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ “ರಂಗೋಲಿಸ್ಪರ್ಧೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕುಟುಂಬದ ನಿರ್ವಹಣೆಯನ್ನು ಮಹಿಳೆಯರು ನಿಭಾಯಿಸಿದರೆ ಮಾತ್ರ ಎಲ್ಲಾ ರೀತಿಯಿಂದಲೂ ಸುಖೀ ಕುಟುಂಬ ಆಗಲು ಸಾಧ್ಯ, ಮಹಿಳೆಯರು ಕುಟುಂಬದಲ್ಲಿ ಪುರುಷರಷ್ಟೇ ಸಮಾನರಾಗಿ ಮನೆಯ ಒಳಗೂ, ಹೊರಗೂ ದುಡಿಮೆ ಮಾಡುತ್ತಿರುವುದರಿಂದ ಆ ಕುಟುಂಬ ಆರ್ಥಿಕವಾಗಿ ಸದೃಢವಾಗಿರಲು ಸಾಧ್ಯ ಎಂಬುದಾಗಿ ಹೇಳಿದರು.

ಕೇಂದ್ರ ಸರ್ಕಾರ ಅನೇಕ ಮಹಿಳೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕಾರ್ಯಕರ್ತರು ಅವುಗಳನ್ನು ಪ್ರತಿಯೊಂದು ಮನೆಗೂ ತಲುಪಿಸುವ ಜವಾಬ್ದಾರಿಯನ್ನು ಹೊರಬೇಕು, ಈ ನಿಟ್ಟಿನಲ್ಲಿ ನನಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗುವ ಎಲ್ಲಾ ಭರವಸೆಗಳಿದ್ದು, ಮುಂದಿನ ದಿನಗಳಲ್ಲಿ ಜನಪರ ಕಾರ್ಯಕ್ರಮ ರೂಪಿಸುತ್ತೇನೆ ಎಂದರಲ್ಲದೆ,

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಪಡೆದು, ಮುಂದಿನ ಉಪಚುನಾವಣೆಯಲ್ಲಿ ನಾನು ಜನಾಶೀರ್ವಾದದಿಂದ ಆಯ್ಕೆಯಾದರೆ, ತಾಲ್ಲೂಕಿನ ಜನತೆಗೆ ಆರ್ಥಿಕ ಪುನಶ್ಚೇತನ ಕೊಡುವ ಕಾರ್ಯಕ್ರಮಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕಾರ್ಯಕ್ಕೆ ಬದ್ಧನಾಗಿರುತ್ತೇನೆ ಎಂಬುದಾಗಿ ಹೇಳಿದರು.

ಬಿಜೆಪಿ ಮುಖಂಡ ಕೇಶವಮೂರ್ತಿ ಮಾತನಾಡಿ, ನಗರದ ಎಲ್ಲಾ 31 ವಾರ್ಡ್ ಗಳಲ್ಲೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಸುತ್ತಿದ್ದು, ವಿಜೇತರಿಗೂ ಹಾಗೂ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗಳಿಗೂ ರಾಜಣ್ಣನವರು ಬಹುಮಾನ ವಿತರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಹೇಳಿದರು.

ಬಿಜೆಪಿ ಮುಖಂಡ ಎ.ರಾಘವೇಂದ್ರ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಾದ ಭೇಟಿ ಬಚಾವೋ ಭೇಟಿ ಪಡಾವೋ, ಜನಧನ್, ಫಸಲ್ ಭೀಮಾ ಯೋಜನೆ, ಉಚಿತ ಗ್ಯಾಸ್ ವಿತರಣೆ ನಗರದ ಬಡಕುಟುಂಬಗಳಿಗೂ ತಲುಪಿದೆ, ಇನ್ನು ಮುಂದೆಯೂ ಜನಪರ ಕಾರ್ಯಕ್ರಮಗಳು ನಿಮ್ಮ ಮನೆಗೆ ತಲುಪಲಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಉಪಾಧ್ಯಾಯರಾದ ಶಿವಣ್ಣ, ಮುಖಂಡರಾದ ಬಸವರಾಜ್, ದ್ಯಾಮಣ್ಣ, ಉಮಾಪತಿ, ಶಿವರಾಜ್, ಹೆಚ್.ವೆಂಕಟೇಶ್, ವಿ.ವಿಶ್ವನಾಥ್, ಜಿ.ಬಿ.ರಾಜು, ರವಿ, ಗೀತಾ, ರಾಜು, ರಾಯಣ್ಣ, ರಾಜಣ್ಣ, ಸಂತೋಷ್, ಪಿ.ಗೋಪಿ, ಮಂಜುನಾಥ್ ಕಬಡ್ಡಿ, ಸಂದೀಪ್, ಸುದೀಪ್, ಸವಿತಾ ಸಮಾಜದ ಮುಖಂಡ ವೈ.ಸುರೇಶ್, ದೇವರಾಜ್, ನವೀನ್, ರಮೇಶ್, ದರ್ಶನ್, ಶಂಕರ್, ಪ್ರಮೀಳ, ಸುರೇಶ್, ಪರಿಮಳ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *