
ಹಿರಿಯೂರು :
ಮಾಜಿಸಚಿವರಾದ ಶ್ರೀರಾಮಚಂದ್ರಗೌಡರ ಅಗಲಿಕೆಯ ನೋವು ಬಿಜೆಪಿಯ ಎಲ್ಲಾ ಹಂತದ ನಾಯಕರು ಹಾಗೂ ಕಾರ್ಯಕರ್ತರುಗಳಿಗೆ ದೊಡ್ಡ ಆಘಾತ ತಂದಿದ್ದು, ಒಬ್ಬ ಸಭ್ಯ ರಾಜಕಾರಣಿ ಪಕ್ಷನಿಷ್ಠೆ, ಪಕ್ಷಕ್ಕಾಗಿ ಅವರು ಸಮರ್ಪಿಸಿದ ಸಮರ್ಪಣಾಭಾವ ಇಂದಿನ ಕಾರ್ಯಕರ್ತರಿಗೆ ಮಾದರಿಯಾಗಿದೆ ಎಂಬುದಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಮುಖಂಡರಾದ ಶ್ರೀರಾಜಣ್ಣ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹಿರಿಯ ನಾಯಕ ಮಾಜಿ ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡರವರು ಮಂಗಳವಾರ ನಿಧನರಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಶ್ರದ್ಧಾಂಜಲಿಸಭೆ”ಯಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಒಂದು ಬಲಿಷ್ಠ ಪಕ್ಷವಾಗಿ ಬೆಳೆಯಲು ರಾಮಚಂದ್ರಗೌಡರವರ ಸೇವೆ ಅಮೋಘವಾದದ್ದು, ಅವರ ಅಪರೂಪದ ವ್ಯಕ್ತಿತ್ವದಿಂದಾಗಿ ಅವರು ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ಸಚಿವರಾಗಿ, ಅಧಿಕಾರ ನಡೆಸುವ ಜನಸೇವೆ ಮಾಡಿದ್ದು, ರಾಜ್ಯಕ್ಕೆ ಅವರ ಸೇವೆ ಸದಾಸ್ಮರಣೀಯ ಎಂಬುದಾಗಿ ಹೇಳಿದರು.
ಹಿರಿಯ ಮುಖಂಡ ಎಂ.ಎಸ್.ರಾಘವೇಂದ್ರ ಮಾತನಾಡಿ, ರಾಮಚಂದ್ರಗೌಡರು ಬಾಲ್ಯದಿಂದಲೇ ಸ್ವಯಂಸೇವಕರಾಗಿ 1970ರಲ್ಲಿ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿ, ಪಕ್ಷ ಸಂಘಟನೆಗೆ ಅವಿರತ ಶ್ರಮಿಸಿದರು, ಸಾಂದರ್ಭಿಕ ರಾಜಕಾರಣದಲ್ಲಿ ಅವರ ಮೇಲೆ ಸುಳ್ಳುಆಪಾದನೆಯನ್ನು ವಿರೋಧ ಪಕ್ಷಗಳು ಮಾಡಿದಾಗ ತಮ್ಮ ಸ್ಥಾನವನ್ನು ತ್ಯಜಿಸಿ ತದನಂತರ ನಿರ್ದೋಷಿಯಾಗಿ ಹೊರಹೊಮ್ಮಿದರು,
ಈ ನಾಡು ಹಾಗೂ ಬಿಜೆಪಿ ಪಕ್ಷ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾದ ರಾಮಚಂದ್ರಗೌಡರು ತಮ್ಮ ರಾಜಕೀಯ ಜೀವನದಲ್ಲಿ ಅನುಸರಿಸಿದ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸಾಗಬೇಕಿದೆ, ಆತ್ಮವಿಶ್ವಾಸ ದೃಢಸಂಕಲ್ಪ ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯಕರ್ತರು ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ದ್ಯಾಮೇಗೌಡರು, ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಕೇಶವಮೂರ್ತಿ, ಟಿ.ಚಂದ್ರಹಾಸ್, ಎಂ.ವಿ.ಹರ್ಷ, ಎ.ರಾಘವೇಂದ್ರ, ಮಲ್ಲೇಶ್ ಕುಮಾರ್, ಧನಂಜಯ್, ಹೆಚ್.ವೆಂಕಟೇಶ್, ನಗರಸಭೆಯ ಮಾಜಿ ಅಧ್ಯಕ್ಷೆ ಮಂಜುಳಾ, ವೇದಮೂರ್ತಿ, ಪಾರ್ಥ, ವೆಂಕಟೇಶ್, ರತ್ನಮ್ಮ, ದ್ರಾಕ್ಷಾಯಿಣಿ, ತಿಪ್ಪೇಸ್ವಾಮಿ, ಹಾಲೇಶ್, ಸಿ.ಜೆ.ಮಂಜುನಾಥ್, ರವಿವರ್ಮ, ಸತೀಶ್ ಶಶಿಕುಮಾರ್ ಇತರರು ಉಪಸ್ಥಿತರಿದ್ದರು.
