
ಹಿರಿಯೂರು :
ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನು ತನ್ನ ಬದುಕಿನ ಉದ್ದಕ್ಕೂ ಪಾಲಿಸಿಕೊಂಡು ಬಂದ, ಕರ್ನಾಟಕದ ಮಾಜಿಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಒಡನಾಡಿಯಾಗಿದ್ದ, ಸರಳ, ಸಜ್ಜನಿಕೆಯ ವ್ಯಕ್ತಿತ್ವದ ರಾಜ್ಯರಾಜಕಾರಣದ ಧೀಮಂತನಾಯಕ ಮಾಜಿ ರಾಜ್ಯಸಭಾಸದಸ್ಯರಾದ ಹೆಚ್.ಹನುಮಂತಪ್ಪನವರ ನಿಧನದಿಂದ ತಳಸಮುದಾಯದ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿಸಕ್ಕರ ಸಂತಾಪ ಸೂಚಿಸಿದ್ದಾರೆ.
ಹೆಚ್.ಹನುಮಂತಪ್ಪನವರು ತಮ್ಮ ಸಾರ್ವಜನಿಕ ಜೀವನದಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಧ್ವನಿಯಾಗಿದ್ದರು. 1982ರಿಂದ 2000 ಇಸವಿಯವರಿಗೆ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷರಾಗಿ ಮಾಡಿದ ಸೇವೆ ಶ್ಲಾಘನೀಯ, ಹಾಗೆಯೇ ಸಮಾಜಮುಖಿ ಪ್ರಗತಿಪರ ಕೆಲಸಗಳನ್ನು ಮಾಡುತ್ತಾ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷರಾಗಿ ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾಗಿ ಮಾಡಿದಂತ ಸೇವೆ ಅನನ್ಯವಾಗಿದೆ ಎಂದು ಅವರ ಬದುಕಿನ ಘಟನೆಗಳನ್ನು ಸ್ಮರಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.
