
ಹಿರಿಯೂರು :
ಸರ್ಕಾರ ಸರ್ಕಾರಿ ಶಾಲೆಗಳಿಗೆ ಬಟ್ಟೆ, ಪುಸ್ತಕ ಕಲಿಕಾಸಾಮಗ್ರಿ, ಬಿಸಿಯೂಟ ಹಾಗೂ ನುರಿತ ಶಿಕ್ಷಕರನ್ನು ನೇಮಿಸಿರುವುದರಿಂದ ಶೈಕ್ಷಣಿಕ ಗುಣಮಟ್ಟ ಉನ್ನತವಾಗಿರುತ್ತದೆ, ಪೋಷಕರು ಹಾಗೂ ವಿದ್ಯಾರ್ಥಿಗಳ ಅಸಡ್ಡೆ ತೋರಿಸದೇ ಗಮನವಿಟ್ಟು ಅಭ್ಯಾಸ ಮಾಡಿಸಿದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸಬಹುದು ಎಂಬುದಾಗಿ ರೋಟರಿ ಅಧ್ಯಕ್ಷರಾದ ಹೆಚ್.ಡಿ.ವಸಂತಕುಮಾರ್ ಹೇಳಿದರು.
ತಾಲ್ಲೂಕಿನ ಆದಿವಾಲ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಆವರಣದಲ್ಲಿ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಶಾಲಾಮಕ್ಕಳಿಗೆ ಉಚಿತ ಕಲರ್ ಯುನಿಫಾರಂ ವಿತರಣೆ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯುನಿಫಾರಂ ವಿತರಿಸಿ, ಅವರು ಮಾತನಾಡಿದರು.

ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ದಾನಿಗಳ ನೆರವಿನಿಂದ ಹಾಗೂ ತಮ್ಮ ಸದಸ್ಯರ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಬಳಸುತ್ತಿದ್ದು, ಆ ಹಣವನ್ನು ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯ ಚಟುವಟಿಕೆಗಳಿಗೆ ವ್ಯಯ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.

ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರರಾಜ್ ಮಾತನಾಡಿ, ಇಂದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಕೂಡ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದವರಾಗಿದ್ದು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಹಾಗೂ ಪೋಷಕರ ಶ್ರಮವನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರಲ್ಲದೆ,
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಪ್ರತಿಶಾಲೆಯ ಹಳೆಯ ವಿದ್ಯಾರ್ಥಿಗಳು, ದಾನಿಗಳು, ಸಂಘ-ಸಂಸ್ಥೆಗಳು, ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು, ರಾಜಕೀಯ ನಾಯಕರುಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವಾಗುವುದರ ಜೊತೆಗೆ ಬದುಕಿನ ಸಾರ್ಥಕತೆಯನ್ನು ಮೆರೆಯಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಟಿ.ಚಂದ್ರಹಾಸ್ ಮತ್ತು ರೆಡ್ ಕ್ರಾಸ್ ಸದಸ್ಯ ಕೇಶವಮೂರ್ತಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ರಾಧಮ್ಮ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಸಹ ಕಾರ್ಯದರ್ಶಿ ಎಸ್.ಜೋಗಪ್ಪ, ರೆಡ್ ಕ್ರಾಸ್ ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರಾದ ಪರಮೇಶ್ವರ್ ಭಟ್, ಬಿ.ಕೆ.ನಾಗಣ್ಣ, ಇನ್ಹರ್ ವ್ಹೀಲ್ ಕಾರ್ಯದರ್ಶಿ ನಿರ್ಮಲ, ಶ್ರೀಮತಿ ಯಮುನಾ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲ, ಸಹಶಿಕ್ಷಕಿ ಶ್ರೀಮತಿಲತಾ, ಶೋಭಾರಾಣಿ, ಅತಿಥಿ ಶಿಕ್ಷಕ ಗಿರೀಶ್, ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
