April 17, 2026
00001

ಹಿರಿಯೂರು :

ಮಹಿಳೆಯರು ಪ್ರಾಚೀನ ಕಾಲದಿಂದ ಒಂದಲ್ಲ ಒಂದು ಕಾರಣದಿಂದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗುತ್ತ ಬಂದಿದ್ದಾರೆ. ತಾಯಿಯ ಪೋಷಣೆ, ಆತ್ಮಸ್ಥೈರ್ಯದಿಂದ ಮಹಿಳೆ ಬೆಳೆಯುತ್ತಾ ಹೋಗಿರುವುದರನ್ನು ನಾವು ಗಮನಿಸಬಹುದು. ಗುರುಗಳಿಗೆ, ಹೆಣ್ಣಿಗೆ, ತಾಯಿಗೆ ಗೌರವ ಕೊಡುವುದನ್ನ ನಾವು ಕಲಿಯಬೇಕು ಎಂಬುದಾಗಿ ಚಿತ್ರದುರ್ಗ ಪೊಲೀಸ್ ಇಲಾಖೆ ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಶ್ರೀಮತಿ ಟಿ.ಎನ್.ಮೇಘಾ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ. ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್‌ ಕ್ರಾಸ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಪ್ರೊ.ಬಿ.ಆರ್.ಹೇಮಲತರವರು ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಯೋತಿ ಬಾಪುಲೆ, ಸಾವಿತ್ರಿಬಾಯಿಪುಲೆ, ಕಿತ್ತೂರು ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಪ್ರತಿಭಾ ಪಾಟೇಲ್, ಇಂದಿರಾಗಾಂಧಿಯವರಂತಹ ಸಾಧಕ ಮಹಿಳೆಯರ ಬದುಕನ್ನು ಹಾಗೂ ಅವರ ಸಾಧನೆಗಳನ್ನು ಅರಿತು ನೀವು ಸಹ ಶಿಕ್ಷಣವನ್ನು ಪಡೆದು ದೇಶದ ಪ್ರತಿಷ್ಠಿತ ಹುದ್ದೆಗಳಿಗೆ ಹೋಗಬೇಕು ಎಂಬುದಾಗಿ ಹೇಳಿದರು.

ಡಾ.ಎ.ದೇವಿಕರವರು ಮಾತನಾಡಿ, ಮಹಿಳೆಯರು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿದ್ದು, ನಾವು ಮಹಿಳೆಯರಿಗೆ ಗೌರವ ಕೊಡಬೇಕು, ಮಹಿಳೆಯರನ್ನೇ ಮಹಿಳೆಯರೇ ಗೌರವಿಸಬೇಕು, ವಿಶ್ವ ಮಹಿಳಾ ದಿನಾಚರಣೆಯನ್ನು ಕೇವಲ ಆಚರಣೆಗೆ ಅಷ್ಟೆ ಸೀಮಿತಗೊಳಿಸಬಾರದು. ಅದುನಿತ್ಯ ಆಚರಣೆಯಲ್ಲಿರಬೇಕು ಎಂದರು.

ಡಾ.ಗಂಗಾಧರ ಆರ್ ರವರು ಮಾತನಾಡಿ, ಇಂದು ವಿಶ್ವ ಮಹಿಳಾ ದಿನಾಚರಣೆ ಕಾಲೇಜಿನಲ್ಲಿ ಆಚರಿಸುತ್ತಿರುವುದು ಉತ್ತಮವಾದದು. ತನ್ನ ತಾಯಿ, ತಂಗಿ, ಅಕ್ಕ, ಮಗಳು, ಪತ್ನಿ ಇವರುಗಳನ್ನು ನಾವು ಸಮಾನವಾಗಿ ನೋಡಬೇಕು. ಇಲ್ಲಿ ಯಾರು ಮೇಲಾಗಿ, ಕೀಳಾಗಿ ನೋಡಬಾರದು. ಅತ್ಯಾಚಾರ, ಶೋಷಣೆ, ದೌರ್ಜನ್ಯಗಳು ನಿಲ್ಲಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಸಮಾನವಾಗಿ ಕಾಣಬೇಕು.

ಬಸವರಾಜ ಟಿ. ಬೆಳಗಟ್ಟ ರವರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯನ್ನು ಈ ಸಂದರ್ಭದಲ್ಲಿ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆ. ಮನೆಯೇ ಮೊದಲ ಶಾಲೆ, ಮೊದಲ ಶಿಕ್ಷಕಿ ತಾಯಿಯಾಗಿ ತನ್ನ ಮಗುವಿಗೆ ಆದರ್ಶ, ತತ್ವ ಸಿದ್ಧಾಂತಗಳನ್ನೇ ತಿಳಿಸುತ್ತ ಬರುವ ಮಹಾನ್ ಸಾಧಕಿಯಾಗುತ್ತಾರೆ. ಮಹಿಳೆಯರು ಎಲ್ಲಾ ರಂಗಗಳಲ್ಲೂ ಬೆಳೆದು ನಿಂತಿದ್ದಾರೆ ನೀವು ಅವರಂತೆ ಬೆಳೆಯಬೇಕು ಎಂದರು.

ಅಧೀಕ್ಷಕರಾದ ಪಿ.ಎನ್.ನರಸಿಂಹಮೂರ್ತಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಯರು ನೂರಾರು ನೋವು, ಸಂಕಟಗಳನ್ನು ಅನುಭವಿಸುತ್ತಾ ಬಂದಿದ್ದು,  ಪ್ರಸ್ತುತ ದಿನಗಳಲ್ಲಿ ಪರುಷರಿಗಿಂತ ಮಹಿಳೆಯರೇ ಹೆಚ್ಚು ಸಾಧನೆಗಳನ್ನು ಮಾಡುತ್ತಿರುವುದನ್ನು ನಾವು ಪ್ರತಿನಿತ್ಯವೂ ನೋಡುತ್ತಿದ್ದೇವೆ ಎಂಬುದಾಗಿ ಹೇಳಿದರು.

ತಾಲ್ಲೂಕು ಖಜಾನೆಯಲ್ಲಿ ಪ್ರಥಮ ದರ್ಜೆ ಸಹಾಯಕರಾದ ಶಭೀನ ಬಾನು ಮಾತನಾಡಿ, ಮಹಿಳಾ ದಿನಾಚರಣೆಗಳ ಫಲವಾಗಿ ಹೆಣ್ಣು ತಮ್ಮ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ ಪಡೆಯುವುದರ ಮೂಲಕ ಸಬಲೀಕರಣಗೊಂಡಿರುವುದು ಸಂತೋಷದ ಸಂಗತಿ, “ಯತ್ರ ನರ‍್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಹ”ಈ ಶೃತಿಯಂತೆ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೂಜ್ಯನೀಯ ಸ್ಥಾನಮಾನ ಇದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಾದ ಮೇಘನಾ ಪೊಲೀಸ್ ಸಬ್‌ ಇನ್ಸ್ ಪೆಕ್ಟರ್, ಶಭೀನ ಬಾನು ತಾಲ್ಲೂಕು ಖಜಾನೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂಬುದಾಗಿ ಹೇಳಿದರು.

ಆರಂಭದಲ್ಲಿ ದ್ವಿತೀಯ ಬಿ.ಎ, ವಿದ್ಯಾರ್ಥಿ ನವ್ಯ ಯಾದವ್ ಸ್ವಾಗತಿಸಿದರು. ಎ.ಸೃಜನ ಕಾರ್ಯಕ್ರಮ ನಿರೂಪಿಸಿದರು, ತೃತೀಯ ಬಿ.ಎ, ತೃತೀಯ ಬಿ.ಕಾಂ. ಮೇಘನಾ ವಿದ್ಯಾರ್ಥಿ ವಂದನಾರ್ಪಣೆ ನೆರವೇರಿಸಿದರು. ಬೋಧಕ ಮತ್ತು ಬೋಧಕೇತರ ವರ್ಗ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *