
ಹಿರಿಯೂರು:
ತುಂಗಾಯಿಂದ ಭದ್ರಾ ಕಾಮಗಾರಿ ಇನ್ನು ವಿಳಂಬವಾಗಿದ್ದು, ಇನ್ನು ಕೇವಲ ಮೂರು ತಿಂಗಳು ಮಾತ್ರ ಕೆಲಸ ಮಾಡಬಹುದು ಆನಂತರ ಮಳೆ ಬರುತ್ತದೆ. ಆದರೆ ತುಂಗಾ ಕಾಮಗಾರಿ ಪ್ರದೇಶದಲ್ಲಿ ವೀಕ್ಷಣೆ ಮಾಡಿದಾಗ ತುಂಗಾಯಿಂದ ಭದ್ರಾ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣವಾಗಿದ್ದಾರೆ ಎಂಬುದಾಗಿ ವಿ.ವಿ.ಸಾಗರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಆರೋಪಿಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಇಂಟೆಕ್ ಕಾಲುವೆಗಳು, ಸಬ್ ಸ್ಟೇಷನ್ ಕಾಮಗಾರಿಗಳು, ಮೋಟಾರ್ ಪಂಪ್ ಜೋಡಣೆ, ಡೆಲವರಿ ಪೈಪ್ ಲೈನ್, ಹಾಗೂ ಸೇತುವೆಗಳು ಸಿವಿಲ್ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ ಎಂಬುದಾಗಿ ಇರುವ ಮೂರು ತಿಂಗಳಲ್ಲಿ ಈ ಕಾಮಗಾರಿಗಳನ್ನು ಮುಗಿಸುವುದು ಅಸಾಧ್ಯದ ಮಾತು, ಹಳೆಯ ಕಾಮಗಾರಿಗಳ ಹಣ ಪಾವತಿ ಮಾಡಿಲ್ಲದೆ ಗುತ್ತಿಗೆದಾರರು ಕಾಮಗಾರಿಗಳನ್ನು ಮುಂದುವರಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ,

ಭದ್ರಾಕ್ಕೆ ಮೀಸಲಾದ ಅನುದಾನವನ್ನು ಬೇರೆಡೆಗೆ ವರ್ಗಾಯಿಸುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡವಿದೆ. ಬರುವ ವರ್ಷದಿಂದ ತುಂಗಾದಿಂದ ಭದ್ರಾಕ್ಕೆ ನೀರು ಹರಿಸುತ್ತೇವೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಈಗಾಗಲೇ ಹೇಳಿರುವ ನೂರೊಂದು ಸುಳ್ಳುಗಳ ಜೊತೆ ಈ ಸುಳ್ಳು ಸಹ ಸತ್ಯವಾಗುತ್ತದೆ. ಆದರೆ ಇದು ಸುಳ್ಳಾಗಲಿ, ಭದ್ರಾ ನೀರು ಬಯಲು ಸೀಮೆಗೆ ಹರಿಯಲಿ ಎಂದು ತಿಳಿಸಿದರು.
ಈ ಸಭೆಯಲ್ಲಿ ವಿ.ವಿ.ಸಾಗರ ನೀರಾವರಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಎಚ್.ಆರ್.ತಿಮ್ಮಯ್ಯ, ಕಾರ್ಯದರ್ಶಿ ಆಲೂರುಸಿದ್ದರಾಮಣ್ಣ, ಖಜಾಂಚಿ ಬಬ್ಬೂರ್ ಸುರೇಶ್, ಉಪಾಧ್ಯಕ್ಷರಾದ ರಾಜೇಂದ್ರ, ನಿರ್ದೇಶಕರಾದ ಆರ್.ಕೆ.ಗೌಡ್ರು , ಪಿಟ್ಲಾಲಿ ಶ್ರೀನಿವಾಸ್, ಮಂಜುನಾಥ್ ಮಾಳಿಗೆ, ಉದ್ಯಮಿ ಮಹಮದ್ ಶಪಿವುಲ್ಲಾ, ನಾರಾಯಣ್ ಆಚಾರ್, ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
