
ಹಿರಿಯೂರು:
ತಾಲ್ಲೂಕಿನ ಕಣಜನಹಳ್ಳಿಯ ಗ್ರಾಮದಲ್ಲಿ ಪತ್ನಿಯ ಶೀಲದ ಬಗ್ಗೆ ಶಂಕಿಸಿದ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆಮಾಡಿ ಸುಟ್ಟು ಹಾಕಿರುವ ಭೀಕರ ಘಟನೆ ನಡೆದಿದ್ದು, ಸುನೀತಾ (25 )ಮೃತ ದುರ್ದೈವಿಯಾಗಿದ್ದು, ಪತಿ ಲಿಂಗರಾಜ್ ಪತ್ನಿಯನ್ನು ಕೊಂದ ಆರೋಪಿಯಾಗಿದ್ದಾನೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ, ಈ ದಂಪತಿಗಳು ಮಕ್ಕಳಾಗದೆ ಇದ್ದ ಕಾರಣದಿಂದಾಗಿ ಈ ದಾಂಪತ್ಯ ಸಂಬಂಧದಲ್ಲಿ ಪತ್ನಿಯ ಶೀಲದ ಬಗ್ಗೆ ಶಂಕಿಸಿ ಪದೇಪದೇ ಜಗಳಗಳು ನಡೆದಿದ್ದವು. ಅಕ್ಟೋಬರ್ 6ರಂದು ಲಿಂಗರಾಜ್ ಸುನೀತಾಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ, ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ಆರೋಪ ಹಬ್ಬಿದೆ.
ಕೃತ್ಯದ ವೇಳೆ ಆರೋಪಿ ಲಿಂಗರಾಜ್ ಗೆ ಬೆಂಕಿಸುಟ್ಟು ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ, ಅಬ್ಬಿನಹೊಳೆ ಪಿ.ಎಸ್.ಐ. ದೇವರಾಜು, ಸಿ.ಐ.ಗುಡ್ಡಪ್ಪ, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಈ ಪ್ರಕರಣವು ಹಿರಿಯೂರು ತಾಲ್ಲೂಕು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

