October 28, 2026
0000001

ಬಹಳ ದಿನಗಳಿಂದ ನಮ್ಮ ಆಫೀಸಿನಲ್ಲಿ ಗೆಳೆಯ-ಗೆಳತಿಯರದೆಲ್ಲಾ ಒಂದೇ ಒತ್ತಡ ನಮ್ಮ ಊರಿನ ಹತ್ತಿರ ಇರುವ ಸುಂದರ ಪ್ರವಾಸಿತಾಣವಾದ 70 ಕಮಾನುಗಳ ಸೇತುವೆ ನೋಡಲು ನಮ್ಮನ್ನು ಕರೆದುಕೊಂಡು ಹೋಗಿ ಎನ್ನುವುದಾಗಿತ್ತು, ಅದರಲ್ಲೂ ವಾಣಿವಿಲಾಸ ಸಾಗರದ ಎಡಬಲ ನಾಲೆಗಳಲ್ಲಿ ನೀರು ಹರಿಸಿದಾಗ ಈ 70 ಕಮಾನುಗಳ ಸೇತುವೆ ಮೇಲೆ ನೀರು ನಿಧಾನವಾಗಿ ಬಳಕುತ್ತಾ ಹರಿದು ಹೋಗುವುದನ್ನು ನೋಡುವುದೇ ಒಂದು ಚೆಂದ ಅದೊಂದು ಅದ್ಭುತವಾದ ಮನಮೋಹಕ ದೃಶ್ಯಕಾವ್ಯ ಎನ್ನಬಹುದು.

ಸುಮಾರು ನೂರಾ ಇಪ್ಪತ್ತು ವರ್ಷಗಳ ಹಿಂದೆ ಮೈಸೂರು ಮಹಾರಾಣಿ ವಾಣಿವಿಲಾಸಅಮ್ಮಣ್ಣಿಯವರ ಮಹದಾಸೆಯಂತೆ ಈ ಭಾಗದ ಬಯಲುಸೀಮೆಯ ರೈತಾಪಿ ಜನರ ವ್ಯವಸಾಯಕ್ಕೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ವಾಣಿವಿಲಾಸ ಸಾಗರ ಜಲಾಶಯವನ್ನು ನಿರ್ಮಿಸುವಾಗ ಈ 70 ಕಮಾನುಗಳ ಸೇತುವೆಯ ನಾಲೆಯನ್ನು ಸಹ ನಿರ್ಮಿಸಿದ್ದಾರೆ ಎನ್ನಲಾಗಿದೆ. ವಾಣಿವಿಲಾಸಸಾಗರದಿಂದ ರೈತರ ಹೊಲಗದ್ದೆಗಳಿಗೆ ನೀರು ಹರಿಸಲು ಎಡಬಲ ನಾಲೆಗಳನ್ನು ಸಹ ನಿರ್ಮಿಸಲಾಗಿದೆ,

ಅದರಲ್ಲೂ ಹಿರಿಯೂರು ನಗರವನ್ನು ಬಳಸಿ ಹರಿವ ನಾಲೆಗೆ ಸಮತಟ್ಟಾದ ಪ್ರದೇಶ ಸಿಗದೆ ಇದ್ದಾಗ ಅಂದಿನ ಮುಖ್ಯ ಎಂಜಿನಿಯರ್ ಆದ ಸರ್.ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಎಂಜಿನಿಯರ್ ಗಳ ತಂಡ ವಿಶೇಷ ತಂತ್ರಜ್ಞಾನ ಬಳಸಿ, ಈ ನಾಲೆ ಹಾದು ಹೋಗುವ ತಗ್ಗಾದ ಗುಡ್ಡಗಾಡು ಪ್ರದೇಶದಲ್ಲಿ ಭೂಮಿಗೆ ಸಮತಟ್ಟಾಗಿ ನಿಲ್ಲುವಂತೆ ಸುಮಾರು 70 ಸುಂದರ ಕಮಾನುಗಳನ್ನು ನಿರ್ಮಿಸಿ ಅದರ ಮೇಲೆ ನಾಲೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಅಂದಿನ ಕಾಲದಲ್ಲಿ ಈ ವಾಣಿವಿಲಾಸ ಸಾಗರ ಜಲಾಶಯವನ್ನು ಸಿಮೆಂಟ್ ಬಳಸದೆ ಬರೀ ಗಾರೆ ಮತ್ತು ಸೈಜುಗಲ್ಲುಗಳಿಂದ ಕಟ್ಟಲಾಗಿದ್ದು, ಸುಮಾರು ನೂರಾ ಇಪ್ಪತ್ತು ವರ್ಷಗಳೇ ಕಳೆದಿದ್ದರೂ ಈ ಅಣೆಕಟ್ಟೆಯಾಗಲಿ, ಬರೀ ಸೈಜುಗಲ್ಲುಗಳು ಹಾಗೂ ಗಾರೆಗಳಿಂದ ನಿರ್ಮಿಸಲಾದ ಈ ಕಮಾನುಗಳ ನಾಲೆಯಾಗಲಿ ಎಲ್ಲಿಯೂ ಲೀಕೇಜ್ ಇಲ್ಲದೆ ಇಂದಿಗೂ ಈ ಕಮಾನು ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿರುವುದೇ ಈ 70 ಕಮಾನುಗಳ ನಾಲೆಯ ವಿಶೇಷವಾಗಿದೆ.

ಈ ಕಮಾನುಗಳ ಸೇತುವೆ ನೋಡಲು ರಜಾದಿನ ಶನಿವಾರ ಹೋಗುವುದೆಂದು ನಿರ್ಧರಿಸಲಾಯಿತು. ಶನಿವಾರ ಮಧ್ಯಾಹ್ನದ ಹೊತ್ತಿಗೆ ಶ್ರೀಪಾದ್ ತಮ್ಮ ಕಾರಿಗೆ ಡೀಸೆಲ್ ತುಂಬಿಸಿಕೊಂಡು ತಂದರು, ಉಮೇಶ, ಕಾಂತರಾಜ್ ಹಾಗೂ ಶಿವರಾಜ್ ಎಲ್ಲರಿಗೂ ಮದ್ಯಾಹ್ನದ ಊಟ ರೆಡಿ ಮಾಡಿಸಿ, ಕಟ್ಟಿಸಿಕೊಂಡು ಬಂದರು. ವಸಂತ, ಸೌಮ್ಯ, ಭಾಗ್ಯ, ಹೇಮಾ, ಪೂಜಾ ಎಲ್ಲರೂ ಸೇರಿ, ಶ್ರೀಪಾದ್ ರವರ ಕಾರಿನಲ್ಲಿ 70 ಕಮಾನುಗಳ ಸೇತುವೆ ನೋಡಲು ಹೊರಟೆವು.

ದಾರಿಯುದ್ದಕ್ಕೂ ವಾಣಿವಿಲಾಸ ಸಾಗರದ ಅಚ್ಚುಕಟ್ಟು ಪ್ರದೇಶದ ಹಸಿರು ಗಿಡಮರಗಳು, ರೈತರು ಬೆಳೆದಿದ್ದ ಅಡಿಕೆ ತೆಂಗು ಬಾಳೆ ತೋಟಗಳು ಹೊಲಗದ್ದೆಗಳು ನಮ್ಮನ್ನು ಕೈಬೀಸಿ ಕರೆಯುತ್ತಿದೆ ಎನ್ನುವಂತಿತ್ತು. ಕಣ್ಣಿಗೆ ಕಾಣುವಷ್ಟು ದೂರ ಎಲ್ಲೆಲ್ಲೂ ಹಸಿರು ವನಸಿರಿ. ಅದೆಲ್ಲ ನೋಡುತ್ತಾ, ಮಧ್ಯಾಹ್ನ ಸುಮಾರು ಒಂದು ಗಂಟೆ ಹೊತ್ತಿಗೆ ನಾವೆಲ್ಲರೂ ಬಂದು ಈ ಎಪ್ಪತ್ತು ಕಮಾನುಗಳ ಸೇತುವೆಯ ಆ ಸುಂದರ ಸ್ಥಳವನ್ನು ತಲುಪಿದೆವು.

ವಾಣಿವಿಲಾಸ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನಾಲೆಯ ತುಂಬಾ ನೀರು ಹರಿಯುತ್ತಿತ್ತು.ಈ ನಾಲೆಯ ಉದ್ದಗಲಕ್ಕೂ ನಿಂತು ನಾವೆಲ್ಲ ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲೇ ಹತ್ತಿರದ ಗುಡ್ಡದ ಮೇಲಿನ ಸುಂದರ “ವ್ಯೂ ಪಾಯಿಂಟ್” ನೋಡಲು ಹೋದೆವು. ಅಲ್ಲಿ ಗುಡ್ಡವನ್ನ ಹತ್ತುವುದೇ ಒಂದು ರೀತಿಯ ಸವಾಲು ಹಾಗೂ ಚಾರಣದಂತಿತ್ತು. ಅಂತೂ “ವ್ಯೂ ಪಾಯಿಂಟ್” ತಲುಪಿ, ಅಲ್ಲಿನ ಮರದ ನೆರಳಿನಲ್ಲಿ ಸ್ವಲ್ಪಹೊತ್ತು ಕುಳಿತು ವಿಶ್ರಾಂತಿ ತೆಗೆದುಕೊಂಡು ನಾವು ತೆಗೆದುಕೊಂಡು ಹೋಗಿದ್ದ ಊಟ-ತಿಂಡಿಯನ್ನು ಎಲ್ಲರೂ ಅಲ್ಲೇ ತಿಂದು ಮುಗಿಸಿದೆವು,

ಸ್ವತಂತ್ರ ಪೂರ್ವದಲ್ಲಿ ಬಹುಶಃ ಬ್ರಿಟೀಷರ ಕಾಲದಲ್ಲಿ ಈ ನಾಲೆ ನಿರ್ಮಾಣವಾಗಿದ್ದು, ಈ ಭಾಗದ ಬ್ರಿಟೀಷ್ ಅಧಿಕಾರಿ ಗುಡ್ಡದಮೇಲೆ ಕುಳಿತು ಈ “ಸುಂದರ ವ್ಯೂ” ವೀಕ್ಷಿಸಲು ಅಥವಾ ಈ ನಾಲೆ ನಿರ್ಮಾಣದ ಅಂದಿನ ಎಂಜಿನಿಯರ್ ಗಳು ಈ ಎತ್ತರದ ಗುಡ್ಡದಮೇಲೆ ಕುಳಿತುಕೊಂಡು ಈ ಯೋಜನೆಯ ನಕ್ಷೆಯನ್ನು ತಯಾರಿಸಿದ್ದರೋ ಏನೋ, ಅಂತು ಈ 70 ಕಮಾನಿನ ಸೇತುವೆಯ ಮೇಲೆ ಹಾದು ಬರುವ ನೀರಿನ ಸುಂದರ ದೃಶ್ಯವನ್ನು ನೋಡಲು ಈ ಗುಡ್ಡದ ಮೇಲೊಂದು “ವ್ಯೂ ಪಾಯಿಂಟ್” ನಿರ್ಮಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಈ ನಮ್ಮ ಪ್ರವಾಸದಲ್ಲಿ ತುಂಬಾ ಚೆನ್ನಾಗಿ ಎಲ್ಲರ ಜೊತೆಗೆ ಸೆಲ್ಫಿ ಕ್ಲಿಕ್ಕಿಸುತ್ತಾ ನಾಲೆಯ ನೀರಿನಲ್ಲಿ ಚಕ್ಕಂದವಾಡುತ್ತಾ ಎಂಜಾಯ್ ಮಾಡಿದವಳೆಂದರೆ ನಮ್ಮ ಗುಂಪಿನಲ್ಲಿದ್ದ ಭಾಗ್ಯ, ನಮ್ಮ ಆಫೀಸಿನಲ್ಲೇ ತುಂಬಾ ಚೆಲ್ಲುಚೆಲ್ಲಾದ ಹುಡುಗಿ, ಎಲ್ಲರ ಜೊತೆ ಖುಷಿಖುಷಿಯಾಗಿ ಬೆರೆಯುತ್ತಾ, ಅತಿ ಸಲುಗೆಯಿಂದ ನಡೆದುಕೊಳ್ಳುವ ಅವಳ ತುಂಟಾಟವನ್ನು “ವ್ಯೂಪಾಯಿಂಟ್” ನಲ್ಲಿ ಕುಳಿತುಕೊಂಡು ನೋಡುತ್ತಿದ್ದ ನನ್ನ ನೆನಪುಗಳು ಹಾಗೆ ನನ್ನ ಅಂದಿನ ಕಾಲೇಜಿನ ದಿನಗಳಿಗೆ ಸರಿದವು.

ನಮ್ಮೂರಿನ ಹತ್ತಿರ ಇಂತಹ ಒಂದು ಸುಂದರ ಪ್ರವಾಸ ತಾಣವಿದ್ದರೂ ಅದನ್ನು ನಾನು ನೋಡಲು ಹೋಗಿರಲಿಲ್ಲ, ಈ 70 ಕಮಾನುಗಳ ನಾಲೆ ನಮ್ಮೂರ ಪಕ್ಕದಲ್ಲೇ ಹಾದುಹೋಗಿದ್ದರೂ ಅದನ್ನು ಎಂದೂ ನೋಡಲು ಹೋಗದದಿರುವ ನಾನು ಇಲ್ಲಿಗೆ ಬಂದದ್ದು, ಕಾಲೇಜಿನ ಪ್ರವಾಸ ಕಾರ್ಯಕ್ರಮದಲ್ಲಿ, ತುಮಕೂರು ಸಿದ್ಧಗಂಗಾ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಗ ಗೆಳೆಯ ಗೆಳತಿಯರ ಜೊತೆ ಅಲ್ಲಿಗೆ ಮೊದಲ ಬಾರಿ ಹೋದ ನೆನಪುಗಳು ಇಂದಿಗೂ ನನಗೆ ಅಚ್ಚಳಿಯದೆ ಹಾಗೆ ಉಳಿದಿವೆ.

ಅಂದು ನಮ್ಮ ಗುಂಪಿನಲ್ಲಿ ಗೆಳೆಯ ಶಶಿಧರ್, ಚಂದ್ರು, ಪ್ರಭಾಕರ್ ಸೇರಿದಂತೆ ವಾಸಂತಿ, ಚಂದ್ರಕಲಾ, ಪೂರ್ಣಿಮಾ ಸಹ ನಮ್ಮ ಜೊತೆ ಪ್ರವಾಸಕ್ಕೆ ಬಂದಿದ್ದರು. ಅಂದು ನಡೆದ ಒಂದು ಆಕಸ್ಮಿಕ ಘಟನೆಯಿಂದಾಗಿ ನನಗೆ ತುಂಬಾ ಹತ್ತಿರವಾದವಳೆಂದರೆ ವಾಸಂತಿ, ಏಕೆಂದರೆ ಆ ನಾಲೆಯ ಬಳಿ ನೀರಿನಲ್ಲಿ ಆಟವಾಡಲು ಹೋಗಿ ಆಯತಪ್ಪಿ ಅವಳು ನಾಲೆಯ ನೀರಿಗೆ ಬಿದ್ದಾಗ ಅಲ್ಲಿದ್ದವರೆಲ್ಲ ಒಮ್ಮೆಗೆ ಕಿರುಚಿಕೊಂಡಿದ್ದರು, ಆಗ ಅಲ್ಲೇ ಹತ್ತಿರದಲ್ಲಿದ್ದ ನಾನು ತಕ್ಷಣ ನೀರಿಗೆ ಹಾರಿ ಅವಳನ್ನು ರಕ್ಷಿಸಿ, ಮೇಲೆ ಕರೆ ತಂದು ಉಪಚರಿಸಿದ್ದೆವು,

ಆಗ ಅದೆಷ್ಟು ಭಯದಿಂದ ವಾಸಂತಿ ಕಣ್ಮುಚ್ಚಿ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಳು ಎಂಬುದು ನನಗೆ ಇನ್ನು ನೆನಪಿದೆ. ಅದೊಂದು ಮೈರೋಮಾಂಚನದ ಅನುಭವ, ಆ ಕ್ಷಣಕ್ಕೆ ಅಲ್ಲಿನ ಸ್ನೇಹಿತರ ಕಣ್ಣಿಗೆ ನಾನು ಹೀರೋತರ ಕಾಣಿಸಿದ್ದೆ. ಅಲ್ಲಿಂದ ಶುರುವಾದ ನನ್ನ ಅವಳ ಸ್ನೇಹ ಒಂದು ದಿನವೂ ನಾವು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಮಟ್ಟಿಗೆ ನಮ್ಮಿಬ್ಬರಲ್ಲಿ ಆತ್ಮೀಯತೆ ಬೆಳೆಯಿತು, ನನಗೇ ಅರಿವಿಲ್ಲದಂತೆ ನನ್ನ ಮನಸ್ಸು ಅವಳ ಮೇಲೆ ಒಂದು ರೀತಿಯ ವ್ಯಾಮೋಹ ಬೆಳೆಸಿಕೊಂಡಿತು.

ಅಷ್ಟರಲ್ಲಿ ಕಾಲೇಜಿಗೆ ದಸರಾ ರಜೆ ಬಂತು,  ಕಾಲೇಜಿನ ರಜೆಗೆಂದು ಊರಿಗೆ ಬಂದವನು ದಸರಾ ರಜೆ ಮುಗಿದ ಮೇಲೆ ನಾನು ಕಾಲೇಜಿಗೆ ಮತ್ತೆ ಹೋದಾಗ ಅಂದು ವಾಸಂತಿ ಕಾಲೇಜಿಗೆ ಬಂದಿರಲಿಲ್ಲ. ಆಗೆಲ್ಲಾ ಈಗಿನ ತರ ಸೆಲ್ ಪೋನ್ ಗಳ ಕಮ್ಯೂನಿಕೇಶನ್ ಇರಲಿಲ್ಲ, ದಸರಾ ರಜದಲ್ಲಿ ವಿದೇಶಿ ಗಂಡು ಡಾಕ್ಟರ್ ಸಿಕ್ಕಿದನೆಂಬ ಕಾರಣಕ್ಕೆ ವಾಸಂತಿ ಪೋಷಕರು ವಿದೇಶಿ ಹುಡುಗನಿಗೆ ಅವಳನ್ನು ಮದುವೆ ಮಾಡಿಕೊಟ್ಟು ವಿದೇಶಕ್ಕೆ ಕಳುಹಿಸಿಕೊಟ್ಟರು ಎಂಬುದಾಗಿ ಗೆಳೆಯ ಶ್ರೀನಾಥ ಹೇಳಿದ.

ಆಗ ನನಗೆ ಅತ್ಯಂತ ದುಃಖವಾಗಿ, ಮನಸ್ಸು ಹಾಗೆ ಮುದುಡಿದಂತಾಯಿತು, ನಾನು ಅವಳಿಗೆ ಅಷ್ಟು ಆತ್ಮೀಯನಾಗಿದ್ದರು ಸಹ “ನೀನು ನನಗೆ ಇಷ್ಟಕಣೆ” ಅಂತ ಹೇಳುವ ಸಂದರ್ಭವೇ ನನಗೆ ಬರಲಿಲ್ಲ, ಮತ್ತು ಅವಳನ್ನು ಮತ್ತೆ ನೋಡುವ ಅವಕಾಶವೂ ಸಿಗಲಿಲ್ಲ. ಆದರೂ ಅಂದು ಈ 70 ಕಮಾನುಗಳ ನಾಲೆಯಲ್ಲಿ ಅವಳು ನೀರಿಗೆ ಬಿದ್ದಾಗ ಭಯದಿಂದ ಕಣ್ಮುಚ್ಚಿ, ನನ್ನ ಬಾಚಿ ತಬ್ಬಿ ಹಿಡಿದಿದ್ದು, ನಂತರ ಕಾಲೇಜಿನಲ್ಲಿ ಅವಳ ಜೊತೆಗೆ ಕಳೆದ ಸುಂದರ ಕ್ಷಣಗಳು ಎಲ್ಲವು ನನ್ನ ನೆನಪಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದುಕೊಂಡಿವೆ.

ಸಂಜೆಯಾಗುತ್ತಿದೆ, ಎಲ್ಲಾ ಎದ್ದೇಳಿ ಹೋಗೋಣ ಎಂದು ಗೆಳೆಯ ಶ್ರೀಪಾದ್ ಹೇಳಿದಾಗ ಕಣ್ಣು ಬಿಟ್ಟು ನೋಡಿ ವಾಸ್ತವಕ್ಕೆ ಬಂದೆ, ಒಂದು ಕ್ಷಣ ನನ್ನ ವಾಸಂತಿ ಕಣ್ಣ ಮುಂದೆ ಈ 70 ಕಮಾನುಗಳ ಸೇತುವೆಯ ಮೇಲೆ ಹಾಗೆಯೇ ಸ್ಲೋ ಮೋಷನ್ ನಲ್ಲಿ ನಡೆದುಕೊಂಡು ಬಂದ ಹಾಗಾಯಿತು. ಅಲ್ಲಿಂದ ನಾವೆಲ್ಲಾ ಎದ್ದು, ಗುಡ್ಡದ “ವ್ಯೂ ಪಾಯಿಂಟ್” ನಿಂದ ಕೆಳಗೆ ನಿಧಾನವಾಗಿ ಇಳಿದು ನಡೆದು ಬರುತ್ತಿರುವಾಗ ಪಶ್ಚಿಮ ದಿಕ್ಕಿನಲ್ಲಿ ಈ 70 ಕಮಾನುಗಳ ಸೇತುವೆಯ ನಾಲೆಯಲ್ಲಿ ಸೂರ್ಯ ಮುಳುಗುತ್ತಿದ್ದ ದೃಶ್ಯ ಕಂಡು ಬಂತು.

About The Author

Leave a Reply

Your email address will not be published. Required fields are marked *