
ಹಿರಿಯೂರು :
ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾಗಿದ್ದು, ಈ ಸಮಯವನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆಯ ಮೂಲಕ ವ್ಯಕ್ತಿತ್ವ ವಿಕಸನಕ್ಕಾಗಿ ಜ್ಞಾನ, ಕೌಶಲ್ಯ, ಪರಿಶ್ರಮ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ನಿವೃತ್ತ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಹೇಳಿದರು
ತಾಲ್ಲೂಕಿನ ಬಬ್ಬೂರುಫಾರಂನ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ದೀಕ್ಷಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ನಂತರ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಬಿ.ಎಸ್.ಸಿ ಅಗ್ರಿಕಲ್ಚರ್ ಆಯ್ಕೆ ಮಾಡಿಕೊಂಡಿರುವ ನೀವುಗಳು ಸರ್ಕಾರಿ ಉದ್ಯೋಗಕ್ಕಾಗಿ ಕಾಯದೆ ನೀವೇ ಉದ್ಯೋಗ ಸೃಷ್ಟಿಸುವಂತಾಗಬೇಕು, ಕೃಷಿ ಕ್ಷೇತ್ರದಲ್ಲಿ ಬರುವ ಸವಾಲುಗಳಿಗೆ ಪರಿಹಾರ ಕಂಡು ಹಿಡಿದು ತೋಟಗಾರಿಕೆ ಉದ್ಯೋಗದಲ್ಲಿ ಆರ್ಥಿಕ ಬೆಳವಣಿಗೆ ಅವಕಾಶ ನೀಡಬೇಕು ಎಂದರಲ್ಲದೆ,

ಯುವಜನರು ರಾಷ್ಟ್ರದ ಶಕ್ತಿಯಾಗಿದ್ದು, ಬದಲಾವಣೆ ನಿಮ್ಮಿಂದಲೇ ಆಗಬೇಕು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೃಷಿಕ್ಷೇತ್ರದಲ್ಲಿ ಅಳವಡಿಸುವ ಮೂಲಕ ಕೃಷಿಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ಹವಾಮಾನ ಮುನ್ಸೂಚನೆ, ಮಣ್ಣಿನ ಪರೀಕ್ಷೆ, ಡ್ರೋನ್ ತಂತ್ರಜ್ಞಾನ, ಉಪಗ್ರಹ ಆಧಾರಿತ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ಡಾ.ಕೇಶವ ಕುಮಾರ್ ಉಪಸ್ಥಿತರಿದ್ದರು. ಆರಂಭದಲ್ಲಿ ಅಧ್ಯಾಪಕರಾದ ಡಾ.ವಾಸುದೇವ್ ಸ್ವಾಗತಿಸಿದರು. ಕೊನೆಯಲ್ಲಿ ಒರಿಸ್ಸಾದ ವಿದ್ಯಾರ್ಥಿನಿ ಅಮೃತ ವಂದಿಸಿದರು.
