
ಹಿರಿಯೂರು :
ಮಹರ್ಷಿವಾಲ್ಮೀಕಿಯಂತಹ ಮಹಾನುಭಾವರನ್ನು ಯಾವುದೇ ಒಂದು ಜಾತಿಜನಾಂಗಕ್ಕೆ ಮಾತ್ರ ಸೀಮಿತಗೊಳಿಸಬಾರದು, ಅವರು ಸರ್ವಜನಾಂಗದವರಿಗೂ ಆದರ್ಶವಾದವರು, ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಕೃತಿಯು ವಿಶ್ವಮಾನ್ಯತೆಯನ್ನು ಪಡೆದಿದ್ದು, ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪೂಜ್ಯನೀಯವಾದ ಮಹಾಕಾವ್ಯವಾಗಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಜಗತ್ತಿಗೆ ಅತ್ಯಂತ ಶ್ರೇಷ್ಠವಾದ ರಾಮಾಯಣ ಮಹಾಕಾವ್ಯವನ್ನು ಕೊಡುಗೆಯಾಗಿ ನೀಡಿದ ಮಹರ್ಷಿ ವಾಲ್ಮೀಕಿಯವರು ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದು, ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆದು ರಾಮಾಯಣದಂತಹ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯವರಿಗೆ ನಾವುಗಳು ಗೌರವ ಸಲ್ಲಿಸಬೇಕು ಎಂಬುದಾಗಿ ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯವು ಮಹಾನ್ ಗ್ರಂಥವಾಗಿದ್ದು, ರಾಮಾಯಣದ ಮುಖ್ಯಪಾತ್ರವಾದ ಶ್ರೀರಾಮನ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ-ಮಗನ ವಾತ್ಸಲ್ಯ, ಸಹೋದರತೆಯ ತತ್ವವನ್ನು ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ಮಹರ್ಷಿ ವಾಲ್ಮೀಕಿಯವರು ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿದ್ದು, ಇಂತಹ ರಾಮಾಯಣ ಮಹಾಕಾವ್ಯದ ಸಾರಾಂಶವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕರಾದ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕಿಯರುಗಳಾದ ಶ್ರೀಮತಿ ರಜಿಯಾಬೇಗಂ, ಶ್ರೀಮತಿ ರಂಜಿತಾ, ಶ್ರೀಮತಿ ಸಬೀಹಾ, ಶ್ರೀಮತಿ ಮುಬೀನಾ, ಶ್ರೀಮತಿ ಸಾಧಿಕಾ, ಶ್ರೀಮತಿ ಮಮತಾ, ಶ್ರೀಮತಿ ಸುಲೋಚನಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಪೂಜಾ, ಶಿಕ್ಷಕರಾದ ಉಮೇಶ್ ಯಾದವ್, ಶಿವರಾಜ್ ನಾಯಕ್, ಸೇರಿದಂತೆ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
