
ಹಿರಿಯೂರು :
ನಗರದ ನೆಹರು ಮೈದಾನದಲ್ಲಿ 55ನೇ ವರ್ಷದ ಸಾರ್ವಜನಿಕ ಶ್ರೀ ಶಕ್ತಿ ಗಣಪತಿ ಪೂಜಾ ಮಹೋತ್ಸವಕ್ಕೆ ಸೋಮವಾರದಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಶ್ರೀಗಣೇಶ ಮೂರ್ತಿಗೆ ಅಲಂಕಾರ ಮಾಡಿ ಅಷ್ಟೋತ್ತರ ಹಾಗೂ ಸಹಸ್ರನಾಮ ಪಠಿಸಲಾಯಿತು.
ನಂತರ ಮಹಾಮಂಗಳಾರತಿ ಮಾಡಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಾರ್ವಜನಿಕ ಶ್ರೀಶಕ್ತಿ ಗಣಪತಿ ಪೂಜಾ ಮಹೋತ್ಸವದ ಅಂಗವಾಗಿ ನಗರದ ಪ್ರಧಾನ ರಸ್ತೆ ವಿದ್ಯುತ್ ದೀಪಗಳ ಅಲಂಕಾರದಿಂದ ಕೊಂಗೊಳಿಸುತ್ತಿತ್ತು. ನಗರದ ನೆಹರು ಮೈದಾನದಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ಈ ಪೂಜಾ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಖಾದಿ ರಮೇಶ್, ಕಬ್ಬಡ್ಡಿ ರವಿ, ಆರ್.ಪ್ರಕಾಶ್ ಕುಮಾರ್, ಜ್ಞಾನೇಶ, ವಕೀಲರಾದ ಮಹಾಂತೇಶ್, ನಗರಸಭೆ ಮಾಜಿ ಸದಸ್ಯರಾದ ಜಗದೀಶ್, ಶಿವು ಯಾದವ್, ಶಿವಕುಮಾರ್ ಸೇರಿದಂತೆ ಉತ್ಸವ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
