
ಹಿರಿಯೂರು :
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದಲ್ಲಿ ಶನಿವಾರ ಬಣ್ಣಬಣ್ಣದ ಪುಷ್ಪಗಳಿಂದ ಅಲಂಕರಿಸಿದ ವಾಹನದಲ್ಲಿ ಶ್ರೀಕೃಷ್ಣನಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ಗೊಲ್ಲ ಯಾದವ ಸಂಘದ ತಾಲೂಕು ಘಟಕ ಹಾಗೂ ಗೊಲ್ಲಯಾದವ ನೌಕರರ ಸಂಘ ಹಾಗೂ ಶ್ರೀಕೃಷ್ಣ ದೇವಸ್ಥಾನದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ವೇದಾವತಿ ಬಡಾವಣೆಯ ಎ.ಕೃಷ್ಣಪ್ಪ ವೃತ್ತದ ಸಮೀಪದ ಶ್ರೀಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಹೂಗಳಿಂದ ಅಲಂಕರಿಸಿದ ಬೆಳ್ಳಿ ಮಾದರಿ ರಥದಲ್ಲಿ ಕೂರಿಸಿದ ಶ್ರೀ ಕೃಷ್ಣಮೂರ್ತಿಗೆ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸನ್ಮಾನ್ಯ ಡಿ.ಟಿ.ಶ್ರೀನಿವಾಸ್ ರವರು ಹಿರಿಯೂರಿನಲ್ಲಿ ವರ್ಷದಿಂದ ವರ್ಷಕ್ಕೆ ಶ್ರೀಕೃಷ್ಣಜನ್ಮಾಷ್ಟಮಿ ಅತ್ಯಂತ ಜನಪ್ರಿಯತೆ ಗಳಿಸುತ್ತಿದ್ದು, ಸಾರ್ವಜನಿಕರ ಶ್ರದ್ಧೆ-ಭಕ್ತಿ ಆಸಕ್ತಿ, ಸಹಕಾರವೇ ಇದಕ್ಕೆ ಕಾರಣವಾಗಿದೆ, ಭಗವಂತ ಶ್ರೀ ಕೃಷ್ಣನ ಆಶೀರ್ವಾದದಿಂದ ಹಿರಿಯೂರು ತಾಲೂಕಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಿ ಆಗಲಿ ಶ್ರೀಕೃಷ್ಣ ಪರಮಾತ್ಮನ ಕೃಪಾಶೀರ್ವಾದ ನಮ್ಮ ತಾಲ್ಲೂಕಿನ ಮೇಲಿರಲಿ ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.

ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಮೆರವಣಿಗೆ ಚಳ್ಳಕೆರೆ ರಸ್ತೆ, ಅಂಬೇಡ್ಕರ್ ವೃತ್ತ, ತಾಲೂಕು ಕಚೇರಿ ಮುಂಭಾಗದಿಂದ ನಗರದೊಳಗೆ ಪ್ರವೇಶಿಸಿದಾಗ ರಸ್ತೆ ಇಕ್ಕಿಲಗಳಲ್ಲಿ ಕಿಕ್ಕೇರಿದು ನಡೆದಿದ್ದ ಸಾರ್ವಜನಿಕರು ಅದನ್ನು ಕಣ್ತುಂಬಿಕೊಂಡರು, ಕೋಲಾಟ, ವೀರಗಾಸೆ, ಉರುಮೆ, ನಾಸಿಕ್, ಡೋಲು ಗೊಂಬೆಯಾಟ, ಚಂಡೆ ಮದ್ದಳೆ, ಡೊಳ್ಳು ಕುಣಿತ, ಕೇರಳ ತಮಟೆ, ವಾದ್ಯ ಬಾರಿಸುವವರ ಸನಿಹದಲ್ಲಿ ನೂರಾರು ಯುವಕರು ನರ್ತಿಸಿದರು.

ಸ್ಪೀಕರ್ ಗಳಿಂದ ಹೊರಹೊಮ್ಮಿದ ಹಾಡುಗಳಿಗೆ ಬಿರು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಯುವಕರು ಮೈ ಮರೆತು ಕುಣಿದು ಕುಪ್ಪಳಿಸಿದರು ಹಾಗೂ ಹಿರಿಯೂರಿನಲ್ಲಿ ಪ್ರಧಾನ ರಸ್ತೆಗೆ ಪರ್ಯಾಯ ರಸ್ತೆ ಇಲ್ಲದಿದ್ದರಿಂದ ಮೆರವಣಿಗೆ ಕಾಲಕ್ಕೆ ಸಂಚಾರ ಅಸ್ತವ್ಯಸ್ತವಾಗಿತ್ತು, ವಾರದ ಸಂತೆಯ ದಿನವಾಗಿದ್ದರಿಂದ ವರ್ತಕರು, ಗ್ರಾಹಕರು ವಾಹನಗಳನ್ನು ಕೊಂಡೊಯ್ಯಲಾರದೆ ಸಾಕಷ್ಟು ತೊಂದರೆ ಅನುಭವಿಸಿದರು.

ಮೆರವಣಿಗೆ ಆರಂಭಕ್ಕೂ ಮೊದಲು ಶ್ರೀ ಕೃಷ್ಣ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ನೆಲಮಂಗಲ ಸಮೀಪದ ಹೊನಕಲ್ಲು ಮಠದ ರಮಾನಂದ ಸ್ವಾಮೀಜಿ, ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ವಿಶ್ವೇಶ್ವರ ಜಲ ನಿಗಮದ ನಿವೃತ್ತ ಎಂ.ಡಿ.ಸಣ್ಣಪ್ಪ, ಜಿ.ಪಂ.ಮಾಜಿಸದಸ್ಯ ಸಿ.ಬಿ.ಪಾಪಣ್ಣ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ಆರ್.ರಂಗಸ್ವಾಮಿ, ಉಗ್ರಮೂರ್ತಿ, ಪಿ.ಆರ್.ದಾಸ್, ಶಿವರಂಜಿನಿಯಾದವ್, ಪ್ರಭುಯಾದವ್, ಶಿವಣ್ಣ, ವಿ.ವಿಶ್ವನಾಥ್, ಬಿ.ಕೆ.ಕರಿಯಣ್ಣ, ನಿರಂಜನ್, ಡಿ.ಯಶೋದರ್, ಎಂ.ಜಯಣ್ಣ, ರವೀಂದ್ರಪ್ಪ, ಶ್ರೀಕೃಷ್ಣ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಜನರು ಪಾಲ್ಗೊಂಡಿದ್ದರು.
