
ಹಿರಿಯೂರು :
ರಾಜ್ಯ ಸರ್ಕಾರದ ಸೇವೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಪ್ರತಿಭಾವಂತ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಹೋನ್ನತ ಉದ್ದೇಶ ಹೊಂದಿರುವ ಸಂವಿಧಾನಿಕ ಸಂಸ್ಥೆ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಇತ್ತೀಚೆಗೆ ಸಾಲುಸಾಲು ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೆ.ಪಿ.ಎಸ್.ಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂಬುದಾಗಿ ಬಿಜೆಪಿ ಯುವಮುಖಂಡ ಎನ್.ಧನಂಜಯ ಒತ್ತಾಯಿಸಿದ್ದಾರೆ.
ಹಲವಾರು ವರ್ಷಗಳಿಂದ ಕೆಪಿಎಸ್.ಸಿ ನೇಮಕಾತಿ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದ್ದು, ಇತ್ತೀಚೆಗೆ ಸಾಕ್ಷ್ಯಾಧಾರಗಳೊಂದಿಗೆ ನೇಮಕಾತಿ ಅಕ್ರಮಗಳು ಹೊರಬೀಳುತ್ತಿರುವುದನ್ನು ನೋಡಿದರೆ ನೇಮಕಾತಿಗಳಲ್ಲಿ ವ್ಯಾಪಕವಾಗಿರುವಂತಹ ಭ್ರಷ್ಟಾಚಾರ ಆಗಿರುವುದು ಕಂಡುಬರುತ್ತಿದ್ದು, ರಾಜ್ಯದ ಯುವಜನತೆ ನೇಮಕಾತಿಗಳಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.
“ಕ್ಲೀನ್ ಕೆಪಿಎಸ್.ಸಿ” ಎನ್ನುವ ಕೂಗು ರಾಜ್ಯಾದ್ಯಂತ ಮಾರ್ಧನಿಸುತ್ತಿದ್ದು, ಕೂಡಲೇ ಸರ್ಕಾರ ಈ ವಿಷಯದಲ್ಲಿ ತಡಮಾಡದೇ ಸಂಪೂರ್ಣ ಅಕ್ರಮಗಳನ್ನು ಹೊರಗೆಳೆಯಬೇಕು, ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ನೇಮಕಾತಿ ಸಂಸ್ಥೆಯೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರುವುದು ತೀವ್ರ ಖಂಡನೀಯ ಎಂದರಲ್ಲದೆ,
ಇತ್ತೀಚೆಗೆ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮವಾಗಿದ್ದು, ಸಿಬಿಐಗೆ ಈ ತನಿಖೆ ವಹಿಸಲು ಕೋರಿ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ಇದಲ್ಲದೆ ಇತ್ತೀಚೆಗೆ ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಕಿರಿಯ ಎಂಜಿನಿಯರ್ ಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಪಿಎಸ್.ಸಿ ಕೈಗೊಂಡ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿನ ಗೃಹ ಮಂತ್ರಿಗಳ ಮೇಲೆ ಈ ಹಿಂದೆ ಕೆಪಿಎಸ್.ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿರುವುದು. ರೆಸಾರ್ಟ್ ಗಳಲ್ಲಿ ಪ್ರಶ್ನೆಪತ್ರಿಕೆ ಓ ಎಂ ಆರ್ ತಿದ್ದುಪಡಿ ನಡೆದಿದೆ ಎನ್ನುವಂತಹ ಆರೋಪಗಳು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಷಯಗಳು ತೀವ್ರ ಸ್ವರೂಪಕ್ಕೆ ತಿರುಗಲಿದೆ, ಶೀಘ್ರವೇ ಸರ್ಕಾರ ನ್ಯಾಯಯುತವಾಗಿ ಒಂದು ಸಮಿತಿ ರಚಿಸಿ ತನಿಖೆ ನಡೆಸಿ ಯುವಜನತೆಗೆ ನ್ಯಾಯ ಒದಗಿಸಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಬರುವಂತೆ ಮಾಡಬೇಕಾಗಿದೆ ಎಂಬುದಾಗಿ ಬಿಜೆಪಿಯುವಮುಖಂಡ ಎನ್.ಧನಂಜಯ ಮನವಿ ಮಾಡಿದ್ದಾರೆ.
