
ಹಿರಿಯೂರು :
ಇಂದಿನ ವಿದ್ಯಾರ್ಥಿಗಳು ಮೋಬೈಲ್ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವ ಜೊತೆಗೆ ಮಾನವೀಯ ಮೌಲ್ಯಗಳನ್ನೇ ಮರೆಯುತ್ತಿದ್ದಾರೆ, ಕೌಟುಂಬಿಕ ವಾತಾವರಣದಿಂದ ದೂರವಾಗಿ ಹಿರಿಯರು-ಕಿರಿಯರ ಜೊತೆಗೆ ಕಳೆಯಬೇಕಾದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂಬುದಾಗಿ ರಿಸೋರ್ಸ್ ಪರ್ಸನ್ ಎ.ಹೆಚ್.ಇ.ಎ.ಡಿ ಸಂಸ್ಥೆಯ ಶಶಿಧರ್ ಕುಮಾರ್ ಹೇಳಿದರು.
ನಗರದ ರೋಟರಿ ಸಂಸ್ಥೆ ಹಿರಿಯೂರು ಇವರ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಸುಮಾರು 53 ವಿದ್ಯಾರ್ಥಿಗಳಿಗೆ ರೋಟರಿ ಯೂತ್ ಲೀಡರ್ ಶಿಪ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
ರಿಸೋರ್ಸ್ ಪರ್ಸನ್ ಎ.ಹೆಚ್.ಇ.ಎ.ಡಿ ಸಂಸ್ಥೆಯ ಸ್ವಸ್ತಿಕ್ ಕನ್ನಾಡೆ ಮೊಬೈಲ್ ಪೋನ್ ಗಳು ಕೇವಲ ಸಂಪರ್ಕ ಮಾಧ್ಯಮಗಳಾಗಿ ಕೆಲಸ ಮಾಡಬೇಕೇ ಹೊರತು, ಮೊಬೈಲ್ ಗಳೇ ಜೀವನದ ಅವಿಭಾಜ್ಯ ಅಂಗಗಳಾಗಬಾರದು, ಅತಿಯಾದ ಮೊಬೈಲ್ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗುವುದರ ಜೊತೆಗೆ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಚ್.ಡಿ.ವಸಂತ್ ಕುಮಾರ್ ಅವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಬಾಲಕಿಯರ ಸರಕಾರಿ ಪಿಯು ಕಾಲೇಜ್ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ , ಅಸಿಸ್ಟೆಂಟ್ ಗವರ್ನರ್ ಸವಿತಾ ಶಿವಕುಮಾರ್, ರೋಟರಿ ಸದಸ್ಯರಾದ ಎಂ.ಎಸ್.ರಾಘವೇಂದ್ರ, ಎಚ್.ವೆಂಕಟೇಶ್, ಬಿ.ಕೆ.ನಾಗಣ್ಣ, ಅಸಿಸ್ಟೆಂಟ್ ಟ್ರೈನರ್ ಎಚ್.ಕಿರಣ್ ಕುಮಾರ್ ಹಾಗೂ ರೋಟರಿ ಕಾರ್ಯದರ್ಶಿಯಾದ ಟಿ.ಚಂದ್ರಹಾಸ್ ಭಾಗವಹಿಸಿದ್ದರು.
