
ಹಿರಿಯೂರು :
ಸಮಾಜದಲ್ಲಿ ನಾಗರಪಂಚಮಿಯ ಬಗ್ಗೆ ಇರುವ ಮೂಢನಂಬಿಕೆಯನ್ನು ದೂರಮಾಡುವ ನಿಟ್ಟಿನಲ್ಲಿ ನಾಗರಪಂಚಮಿಯನ್ನು ಹುತ್ತಕ್ಕೆ ಹಾಲೆರೆದು ಆಚರಿಸುವ ಬದಲಾಗಿ ಅದೇ ಹಾಲನ್ನು ಮಕ್ಕಳಿಗೆ ಕುಡಿಸುವ ಕೆಲಸಮಾಡಬೇಕು ಎಂಬುದಾಗಿ ಕರ್ನಾಟಕ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಕೂನಿಕೆರೆ ಮಾರುತೇಶ್ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಘಟಕ ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಗರಪಂಚಮಿಯನ್ನು ಬಸವಪಂಚಮಿಯಾಗಿ ಆಚರಿಸುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮಕ್ಕಳಿಗೆ ಹಾಲು ವಿತರಿಸಿ, ಅವರು ಮಾತನಾಡಿದರು.

ಶ್ರೀಯುತ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಪ್ರಾರಂಭವಾಗಿರುವ ಮಾನವ ಬಂಧುತ್ವ ವೇದಿಕೆಯು ಸಮಾಜದ ಜನರ ಮೂಢನಂಬಿಕೆಗಳನ್ನು ಹೋಗಲಾಡಿಸುವ ಕೆಲಸವನ್ನು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ನಾಗರಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸುವ ಕೆಲಸ ಮಾಡುತ್ತಿದ್ದು, ಈ ಆಚರಣೆಯನ್ನು ಸಮಾಜದ ಪ್ರತಿಯೊಬ್ಬರೂ ಆಚರಿಸುವಂತಾಗಬೇಕು ಎಂಬುದಾಗಿ ಹೇಳಿದರು.

ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪನವರು ಮಾತನಾಡಿ, ಕಲಾವಿದರು ಹಾಗೂ ಪತ್ರಕರ್ತರಾದ ಕೂನಿಕೆರೆ ಮಾರುತೇಶ್ ರವರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ನಾಗರಪಂಚಮಿಯನ್ನು ಬಸವಪಂಚಮಿಯಾಗಿ ಆಚರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕಿಯರುಗಳಾದ ಶ್ರೀಮತಿ ಗಂಗಮ್ಮ, ಶ್ರೀಮತಿ ಸಬೀಹಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಉಮೇಶ್ ಯಾದವ್ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
