July 29, 2026
00003

ಹಿರಿಯೂರು:    

ಮಾನವನ ಮೆದುಳು ಪ್ರಕೃತಿಯ ಅತ್ಯಂತ ವಿಸ್ಮಯಕಾರಿ ಸೃಷ್ಠಿ, ಇದು ಕೇವಲ ಒಂದು ಅಂಗವಲ್ಲ, ಬದಲಿಗೆ ಜಗತ್ತಿನ ಅತ್ಯಂತ ಬಲಿಷ್ಠ ಸೂಪರ್ ಕಂಪ್ಯೂಟರ್‌ಗಳನ್ನೂ ಮೀರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ಸ್ಮರಣಶಕ್ತಿಯಲ್ಲಿ ವಿಶ್ವದಾಖಲೆ ಪಡೆದಿರುವ  ಅಂತರಾಷ್ಟ್ರೀಯ ಸ್ಮರಣಶಕ್ತಿ ತರಬೇತುದಾರ ಡಾ||ಎಂ.ರವಿಪ್ರಸಾದ್ ಸಜ್ಜನ್ ರವರು ಹೇಳಿದರು.

ತಾಲ್ಲೂಕಿನ ಭೀಮನಬಂಡೆಯಲ್ಲಿರುವ ಯಜ್ಞವಲ್ಕ್ಯಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೋಸ್ಕರ ಆಯೋಜಿಸಲಾಗಿದ್ದ “ಮಾನವನ ಮೆದುಳು ಒಂದು ಶಕ್ತಿಶಾಲಿ ಕಂಪ್ಯೂಟರ್” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಜ್ಞಾನಿಗಳ ಅಧ್ಯಯನದ ಪ್ರಕಾರ ಮನುಷ್ಯರ ಮೆದುಳು ಸರಿಸುಮಾರು ೨.೫ ಪೆಟಾಬೈಟ್‌ಗಳಷ್ಟು ಅಂದರೆ ಸುಮಾರು ೨.೫ ಮಿಲಿಯನ್ ಜಿಬಿ ಗಳಷ್ಟು ಮಾಹಿತಿಯನ್ನು ಸಂಗ್ರಹಿಸಿಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ.  ಇದು ಸರಿಸುಮಾರು ೩ ಮಿಲಿಯನ್ ಗಂಟೆಗಳ ಹೆಚ್‌.ಡಿ ವಿಡಿಯೋ ಸಂಗ್ರಹ ಮತ್ತು ೩೪೦ ವರ್ಷಗಳಿಗೂ ಹೆಚ್ಚು ಕಾಲ ನಿರಂತರ ವಿಡಿಯೋ ಪ್ಲೇಬ್ಯಾಕ್‌ ಗೆ ಸಮಾನವಾಗಿದೆ ಎಂದು ವರದಿಯಾಗಿದೆ. ಹೀಗಾಗಿಯೇ ಮಾನವನ ಮೆದುಳನ್ನು ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ನಮ್ಮ ಮೆದುಳಿನಲ್ಲಿ ಸರಿಸುಮಾರು ೮೬ ಶತಕೋಟಿ ನರಕೋಶಗಳಿವೆ. ಪ್ರತಿಯೊಂದು ನರಕೋಶವು ಸಿನಾಪ್ಸಸ್ ಎಂದು ಕರೆಯಲ್ಪಡುವ ಸಾವಿರಾರು ಸಂಪರ್ಕಗಳನ್ನು ಹೊಂದಿದೆ. ಈ ಜಾಲಗಳು ಅಪಾರ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಲು ಕಾರಣವಾಗಿದೆ ಎಂದು ತಿಳಿಸಿದರು.

ಜಗತ್ತು ಕಂಡ ಅತ್ಯದ್ಭುತ ಮೇಧಾವಿ ಆಲ್ಬರ್ಟ್ ಐನ್‌ಸ್ಟೀನ್ ರವರು ಅವರ ಮೆದುಳಿನ ಒಟ್ಟು ಶಕ್ತಿಯ ಶೇಕಡಾ ೭ರಷ್ಟು ಮಾತ್ರ ಬಳಸಿದ್ದಾರೆ ಹಾಗೂ ಮೇಧಾವಿಯಾಗಿದ್ದಾರೆ. ಆದರೆ ಜನಸಾಮಾನ್ಯರಾದ ನಾವು ನಮ್ಮ ಮೆದುಳಿನಲ್ಲಿ ಅಗಾಧ ಶಕ್ತಿ ಸಾಮರ್ಥ್ಯ ಇದ್ದರೂ ಸಹ ನಾವು ಆ ಮೆದುಳಿನ ಸಂಪೂರ್ಣ ಉಪಯೋಗ ಪಡೆಯುತ್ತಿಲ್ಲ.

ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಕೃತಿಯು ನಮಗೆ ದೈವದತ್ತವಾಗಿ ನೀಡಿರುವ ನಮ್ಮ ಮೆದುಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಮೂಲಕ ಜೀವನದಲ್ಲಿ ಉನ್ನತ ಸಾಧನೆಯ ಯಶಸ್ವಿ ವ್ಯಕ್ತಿಗಳಾಗಬಹುದು ಎಂದು ಪ್ರತಿಪಾದಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯಜ್ಞವಲ್ಕ್ಯ ಪಬ್ಲಿಕ್ ಶಾಲೆ ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ ಮಾತನಾಡಿ, ಡಾ||ರವಿಪ್ರಸಾದಸಜ್ಜನ್ ರವರು ವಿಶ್ವಮಟ್ಟದಲ್ಲಿ “ವರ್ಲ್ಡ್ ಮೆಮೋರಿ ಮ್ಯಾನ್”ಎಂದು ಪ್ರಸಿದ್ಧರಾಗಿದ್ದು, ಇವರು ಸೃಜನಾತ್ಮಕ ಸ್ಮರಣಶಕ್ತಿ ಮತ್ತು ವ್ಯಕ್ತಿತ್ವವಿಕಸನ ಕ್ಷೇತ್ರದಲ್ಲಿ ವಿಶೇಷ ಪಾಂಡಿತ್ಯ ಪಡೆದು, ದೇಶದಾದ್ಯಂತ ಇವರು ನೀಡಿರುವ ಉಪನ್ಯಾಸ ಹಾಗೂ ಕಾರ್ಯಾಗಾರಗಳಿಂದ ೪ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡಿದ್ದಾರೆ.

ಇವರು ಹಿರಿಯೂರಿನವರಾಗಿದ್ದು, ನಮ್ಮ ಯಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ವಿಶೇಷ ಉಪನ್ಯಾಸ ನೀಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದ ಅವರು ಇಂತಹ ತರಬೇತುದಾರರು ವಿದ್ಯಾರ್ಥಿಗಳಿಗೆ ಒಂದು ವರದಾನ, ಇವರು ಹೇಳುವ ವಿಷಯಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥಮಾಡಿಕೊಳ್ಳುವ ಮೂಲಕ ಉತ್ತಮ ಸ್ಮರಣಶಕ್ತಿ ಪಡೆಯಬೇಕು ಎಂಬುದಾಗಿ ಹೇಳಿದರು. 

ಈ ಕಾರ್ಯಕ್ರಮದಲ್ಲಿ ವೇಣುಕುಮಾರ್, ನವೀನ್‌ಪ್ರಭು, ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

About The Author

Leave a Reply

Your email address will not be published. Required fields are marked *