
ಹಿರಿಯೂರು :
ಬಾಲ್ಯದಿಂದಲೇ ಕ್ರೀಡೆಗಳನ್ನು ಅಭ್ಯಾಸ ಮಾಡಿದರೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುವ ಜೊತೆಗೆ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ, ಈ ನಿಟ್ಟಿನಲ್ಲಿ ಹಿರಿಯೂರಿನಲ್ಲಿ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಸುಹಾಸ್ ಸುಧಾಕರ್ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿರುವ ಗರುಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಜೂನಿಯರ್ಸ್ ಖೋ-ಖೋ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಪ್ರಮುಖವಾಗಿವೆ, ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳನ್ನು ಅಭ್ಯಾಸ ಮಾಡುವುದರಿಂದ ವಯಸ್ಸಾದ ನಂತರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಆರೋಗ್ಯದವೃದ್ದಿಗೆ ಕ್ರೀಡೆಗಳು ಅತ್ಯವಶ್ಯಕ ಎಂಬುದಾಗಿ ಹೇಳಿದರು.
ಯುವ ಮುಖಂಡರಾದ ಸಂದೀಪ್ ಗುಂಡಾರ್ಪಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಸೋಲನ್ನು ಗೆಲುವಿನ ಮೆಟ್ಟಿಲು ಎಂದು ತಿಳಿದು, ಹೆಚ್ಚಿನ ಅಭ್ಯಾಸ ಮಾಡಲು ಮುಂದಾಗಬೇಕು, ಬದಲಾಗಿ ಯಾವುದೇ ಪರಸ್ಪರ ವೈಶಮ್ಯಕ್ಕೆ ಆಸ್ಪದ ನೀಡದೆ, ಕ್ರೀಡಾಸ್ಪೂರ್ತಿಯಿಂದ ಟೂರ್ನಿಯಲ್ಲಿ ಭಾಗವಹಿಸಬೇಕು ಎಂಬುದಾಗಿ ಸಲಹೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರುಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಟಿ.ಚಂದ್ರಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಂಸ್ಥೆಯ ಗೌ.ಅಧ್ಯಕ್ಷರುಗಳಾದ ಕೆ.ವಿ.ಅಮರೇಶ್, ಡಿ.ನಾರಾಯಣರೆಡ್ಡಿ, ಕಾರ್ಯಾಧ್ಯಕ್ಷ ಕೆ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಪ್ರಸಾದ್, ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಉಪಾಧ್ಯಕ್ಷರಾದ ಬಸವರಾಜ, ಕಾರ್ಯದರ್ಶಿ ರಾಮಲಿಂಗಪ್ಪ, ಜಿಲ್ಲಾ ಖೋಖೋ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ರಾಮಕೃಷ್ಣ, ಕರ್ನಾಟಕರಾಜ್ಯಮಾಧ್ಯಮ ಅಕಾಡೆಮಿಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಚಿತ್ರದುರ್ಗ ಜಿಲ್ಲಾ ಖೋ-ಖೊ ಸಂಸ್ಥೆ ಕಾರ್ಯದರ್ಶಿ ಶಿವಪ್ರಸಾದ್ ಚಿತ್ರದುರ್ಗ ಖೋ-ಖೊ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಎಂ.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಮಾಜಿನಗರ ಸಭಾ ಸದಸ್ಯರಾದ ಈರಲಿಂಗೇಗೌಡ, ಜಗದೀಶ್ ಭಂಡಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದಂತ ಖೋ-ಖೊ ತರಬೇತಿದಾರರು ಉಪಸ್ಥಿತರಿದ್ದರು.
