July 29, 2026
0002

ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಅಳವಡಿಸಿರುವ ಪರಿವರ್ತಕಗಳು ತಾಂತ್ರಿಕ ತೊಂದರೆಯಾದಲ್ಲಿ ಅಥವಾ ಪರಿವರ್ತಕಗಳು ಸುಟ್ಟು ಹೋದಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ 72 ಗಂಟೆಯ ಒಳಗಾಗಿ ಬದಲಾಯಿಸಿ ಕೊಡಬೇಕೆಂಬ ಆದೇಶವಿದ್ದರೂ ಸಹ ರೈತರಿಗೆ 15 ರಿಂದ 20 ದಿನಗಳು ಕಳೆದರೂ ಪರಿವರ್ತಕಗಳನ್ನು ನೀಡದೆ ರೈತರಿಗೆ ಇಲ್ಲಸಲ್ಲದ ಸಬೂಬು ಹೇಳಿ ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಬ್ಯಾಡರಹಳ್ಳಿ ಶಿವಕುಮಾರ್ ಒತ್ತಾಯಿಸಿದರು.   

ನಗರದ ಬೆಸ್ಕಾಂ ಇಲಾಖೆಯಲ್ಲಿ ರೈತರ ಸುಟ್ಟುಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ಸರಿಪಡಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಪರಿವರ್ತಕಗಳು ಇಲ್ಲದೆ, ರೈತರ ಬೆಳೆಗಳು ಒಣಗುತ್ತಿದ್ದು ಬೆಸ್ಕಾಂ ಇಲಾಖೆ ನಿರ್ಲಕ್ಷ ಖಂಡಿಸಿ, ಬೊಬಲ್ ಸ್ಟಾಕ್ ಸಹ ಇಲ್ಲದೆ ಕುಡಿಯುವ ನೀರಿಗೂ ಸಹ ತೊಂದರೆ ಉಂಟಾಗುತ್ತಿದ್ದು, ಈ ವಿಳಂಬ ಧೋರಣೆ ವಿರುದ್ಧ ತಮ್ಮ ಇಲಾಖೆಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಉಗ್ರವಾದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದರಲ್ಲದೆ,

ಒಂದು ವಾರದ ಒಳಗೆ ರೈತರಿಗೆ ಪರಿವರ್ತಕ ನೀಡದಿದ್ದಲ್ಲಿ, ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಇದೇ ಜುಲೈ 1 ರಂದು ತಾಲೂಕಿನ ರೈತರೊಂದಿಗೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ತಾಲ್ಲೂಕು ರೈತಸಂಘದ ಪರವಾಗಿ ಬೆಸ್ಕಾಂ ಇಲಾಖೆಗೆ ಅವರು ಎಚ್ಚರಿಕೆ ನೀಡಿದ್ದಾರೆ.  

ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು, ರೈತ ಚಿದಾನಂದಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *