
ಹಿರಿಯೂರು:
ತಾಲ್ಲೂಕಿನ ಪ್ರಸಿದ್ಧ ವಾಣಿವಿಲಾಸಪುರ (ಮಾರಿಕಣಿವೆ) ಜಾತ್ರೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಬೇಜವಾಬ್ದಾರಿತನ ಬಯಲಾಗಿದೆ. ಬೈಕ್ ಅಪಘಾತಕ್ಕೀಡಾಗಿ ಮಹಿಳೆಯೊಬ್ಬರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದರೂ, ಚಿಕಿತ್ಸೆ ನೀಡಲು ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯರಾಗಲಿ ಅಥವಾ ಸಿಬ್ಬಂದಿಯಾಗಲಿ ಲಭ್ಯವಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸೇರುತ್ತಿರುವುದರಿಂದ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿರಬೇಕಿತ್ತು. ಆದರೆ, ಅಪಘಾತದಲ್ಲಿ ಕಾಲುಗಳು ಮುರಿದು ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಾಗ, ಅಲ್ಲಿ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡಲು ನರ್ಸ್ ಕೂಡ ಇರಲಿಲ್ಲ. ಆಸ್ಪತ್ರೆಯು ಸಂಪೂರ್ಣವಾಗಿ ಸಿಬ್ಬಂದಿ ರಹಿತವಾಗಿದ್ದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಈ ಘಟನೆಯ ಕುರಿತು ಮಾಹಿತಿ ನೀಡಲು ಹಾಗೂ ತುರ್ತು ನೆರವು ಕೋರಲು ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ವೆಂಕಟೇಶಪ್ಪ ಅವರಿಗೆ ಸಾರ್ವಜನಿಕರು ಸತತವಾಗಿ ಕರೆ ಮಾಡಿದರೂ, ಅವರು ಕರೆಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಸಂಕಷ್ಟದ ಸಮಯದಲ್ಲಿ ಸ್ಪಂದಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ನಡೆದುಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಅತಿದೊಡ್ಡ ಜಾತ್ರೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಇರಬೇಕೆಂಬ ನಿಯಮವಿದ್ದರೂ, ಆಸ್ಪತ್ರೆಯನ್ನು ಖಾಲಿ ಬಿಟ್ಟಿದ್ದು ಏಕೆ? ಕರ್ತವ್ಯದ ಸಮಯದಲ್ಲಿ ಗೈರುಹಾಜರಾದ ಸಿಬ್ಬಂದಿ ಹಾಗೂ ಸಾರ್ವಜನಿಕರ ಕರೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಕ್ಷಣ ಶಿಸ್ತು ಕ್ರಮ ಜರುಗಿಸಬೇಕು ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಜಾತ್ರೆ ಮುಗಿಯುವವರೆಗೂ ಆಸ್ಪತ್ರೆಯಲ್ಲಿ 24×7 ವೈದ್ಯಕೀಯ ಸೇವೆ ಲಭ್ಯವಿರುವಂತೆ ಜಿಲ್ಲಾಡಳಿತ ಖಾತರಿಪಡಿಸಬೇಕು. ಜನರ ಪ್ರಾಣ ರಕ್ಷಿಸಬೇಕಾದ ಆರೋಗ್ಯ ಇಲಾಖೆ ಈ ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ವ್ಯವಸ್ಥೆ ಮಾಡಬೇಕು ಎಂಬುದಾಗಿ ಸಾರ್ವಜನಿಕರ ಪರವಾಗಿ ಪವರ್ ಫೋಕಸ್ ನ್ಯೂಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಒತ್ತಾಯಿಸಿದ್ದಾರೆ.
