
ಹಿರಿಯೂರು :
ಕುಂಚಿಟಿಗ ಸಮಾಜದ ಹೆಸರಿನಲ್ಲಿ ವೈಯಕ್ತಿಕ ಲಾಭ ಮಾಡಿಕೊಂಡು ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಧಾರ್ಮಿಕ ನೇತಾರರು ಮತ್ತು ರಾಜಕೀಯ ಧುರೀಣರು ಕೇವಲ ಸರ್ಕಾರಿ ಅನುದಾನ ಮತ್ತು ಚುನಾವಣೆ ಟಿಕೆಟ್ ಗಾಗಿ ಒಕ್ಕಲಿಗ ಜಪ ಮಾಡುತ್ತಾ ಕುಂಚಿಟಿಗರಿಗೆ ಕಳೆದ 27 ವರ್ಷಗಳಿಂದ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ನಿರಂತರವಾಗಿ ಶೋಷಣೆ ಮಾಡುತ್ತಾ ಬಂದಿರುತ್ತಾರೆ ಎಂಬುದಾಗಿ ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಕುಂಚಿಟಿಗರಿಗೆ ಕೇಂದ್ರ ಸರ್ಕಾರದಲ್ಲಿದ್ದ ಓಬಿಸಿ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿಸಿ, ಕುಂಚಿಟಿಗರಿಗೆಲ್ಲ ಒಕ್ಕಲಿಗ ಎಂದು ಬರೆಯಿಸಿ ಓಬಿಸಿ ಮೀಸಲಾತಿ ಪಡೆಯಿರಿ ಎಂದು ಕಾನೂನುಬಾಹಿರ ಉಪದೇಶ ಮಾಡಿದ ಧಾರ್ಮಿಕ ನೇತಾರರು ಮತ್ತು ರಾಜಕೀಯ ಧುರೀಣರ ಮಾತು ಕೇಳಿ ಬಹುತೇಕ ರೈತಾಪಿ ಕುಂಚಿಟಿಗರು ತಂದೆ ಜಾತಿ ಕುಂಚಿಟಿಗ ಇದ್ದಾಗ್ಯೂ ಮಕ್ಕಳಿಗೆ ಒಕ್ಕಲಿಗ ಎಂದು ಬರೆಯಿಸಿ ಸಿಕ್ಕಂತ ನೌಕರಿ ಗೆದ್ದ ರಾಜಕೀಯ ಸ್ಥಾನಮಾನಗಳನ್ನು ಕಳೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ನಕಲಿ ಜಾತಿಪತ್ರ ಪಡೆದ ಆರೋಪದಡಿ, ಕಾನೂನಾತ್ಮಕ ತೊಂದರೆ ಅನುಭವಿಸುವಂತೆ ಆಗಿದೆ ಅದಾಗಿಯೂ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಕುಂಚಿಟಿಗ ನೆಲದಲ್ಲಿ ಒಕ್ಕಲಿಗ ಜಪ ಮಾಡುವ ಚಾಣಕ್ಯರು ಜಯಂತಿ ಮತ್ತು ಪ್ರತಿಮೆ ಸ್ಥಾಪನೆ ಹೆಸರಿನಲ್ಲಿ ಭಾವನಾತ್ಮಕ ತಂತ್ರಗಾರಿಕೆ ಮಾಡಿ ಕುಂಚಿಟಿಗರನ್ನು ಅಡಕತ್ತರಿಗೆ ಸಿಲುಕಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುತ್ತಾರೆ,
ಅಂತವರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಪಡೆದು ದಾಖಲೆ ಸಹಿತ ಮನೆದೇವರು ಮತ್ತು ಕುಲಬೆಡಗೂ ಸಹಿತ ತಮ್ಮ ಬಯೋಡೇಟಾ ಬಹಿರಂಗಪಡಿಸಲಿ ಎಂಬುದಾಗಿ ಕಸವನಹಳ್ಳಿ ರಮೇಶ್ ಸವಾಲು ಹಾಕಿದ್ದಾರೆ, ಇನ್ನು ಮುಂದೆ ಕುಂಚಿಟಿಗರನ್ನು ಕಡೆಗಣಿಸಿ ಒಕ್ಕಲಿಗ ಮಂತ್ರ ಜಪಿಸುವವರಿಗೆ ಸ್ವಾಭಿಮಾನ ಕುಂಚಿಟಿಗರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಇಂಥವರಿಗೆ ಹೆಣ್ಣು ಕೊಟ್ಟರೆ ನಾಳೆ ನಿಮ್ಮ ಮಕ್ಕಳು ಜಾತಿ ಸಿಂಧುತ್ವ ಸಿಗದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಾಗಿ ತಿಳಿಸಿದರು.
ಕಳೆದ 27 ವರ್ಷಗಳಿಂದ ಕೇಂದ್ರ ಒ.ಬಿ.ಸಿ ಮೀಸಲಾತಿ ತಪ್ಪಿಸಿ, ಮೀಸಲಾತಿ ಆಸೆಗಾಗಿ ಅನ್ಯ ಜಾತಿಗಳತ್ತ ಮುಖ ಮಾಡಿದ್ದ, ಕುಂಚಿಟಿಗರಿಗೆ ಇಕ್ಕಟ್ಟಿಗೆ ಸಿಲುಕಿಸಿ, ಈಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗೆ ಮಾಡದೆ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ವಿಭಾಗ ಮಾಡಿ ಕುಂಚಿಟಿಗರಿಗೆ ಕೈಬಿಟ್ಟು ಹೋದ ಕೇಂದ್ರ ಒ.ಬಿ.ಸಿ ಮೀಸಲಾತಿ ಕೊಡಿಸುವ ನೆಪದಲ್ಲಿ ನಗರ ಕುಂಚಿಟಿಗರಿಗೆ ಕೇಂದ್ರ ಒಬಿಸಿ ಮೀಸಲಾತಿ ತಪ್ಪಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ.
ಇನ್ನು ಮುಂದೆ ನಗರ ಕುಂಚಿಟಿಗರಿಗೆ ಈ.ಡಬ್ಲ್ಯೂ.ಎಸ್ ಮೀಸಲಾತಿ ಕೂಡ ಕೈಬಿಟ್ಟು ಹೋಗಿ ಜನರಲ್ ಮೆರಿಟ್ ನಲ್ಲಿ ಬರುತ್ತಾರೆ, ಇದಕ್ಕೆಲ್ಲಾ ಟಿ.ಬಿ.ಜಯಚಂದ್ರಾರವರು ನೇರಹೊಣೆಯಾಗಿದ್ದು, ರಾಜ್ಯ ಸರ್ಕಾರದ ಕರಾಳ ತೀರ್ಮಾನವನ್ನು ಕರ್ನಾಟಕ ರಾಜ್ಯದ 18 ಜಿಲ್ಲೆ 46 ತಾಲೂಕುಗಳ ಕೇಂದ್ರ ಸ್ಥಾನದಲ್ಲಿ ವಾಸಿಸುವ ನಗರ ಕುಂಚಿಟಿಗರು ನಿಮ್ಮ ಜಿಲ್ಲೆ ಮತ್ತು ತಾಲೂಕುಗಳಲ್ಲಿರುವ ಕುಂಚಿಟಿಗ ಸಂಘ ಸಂಸ್ಥೆಗಳ ಮುಖಂಡರುಗಳನ್ನು ಸೇರಿಸಿ, ಪತ್ರಿಕಾಗೋಷ್ಠಿ ಕರೆದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಒತ್ತಾಯ ಮಾಡಬೇಕೆಂದು ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮನವಿ ಮಾಡಿದ್ದಾರೆ.
