April 16, 2026
0007

ಬೆಂಗಳೂರು:

ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಅಕ್ಷರಗಳ ಹಂಚುವ ಮೂಲಕ ನಾಡಿನ ಮನೆ ಮನ ಬೆಳಗುತ್ತಿದ್ದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಬುಲಿಂಗ (43) ಅವರು ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪರೂಪದ ‘ಜಿ.ಬಿ. ಸಿಂಡ್ರೋಮ್’ ಕಾಯಿಲೆಯಿಂದ ಆಸ್ಪತ್ರೆ ಸೇರಿರುವ ಅವರ ಬದುಕು ಉಳಿಸಲು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘಟನೆಯು ಶಕ್ತಿಮೀರಿ ಪ್ರಯತ್ನಿಸುತ್ತಿದೆ.

ಬೆಂಗಳೂರಿನ ವಿಕ್ರಮ್ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಇಂದು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ಪವರ್ ಫೋಕಸ್ ನ್ಯೂಸ್ ಮುಖ್ಯಸ್ಥ ಅರ್ಜುನ್ ಬ್ಯಾಡರಹಳ್ಳಿ ಅವರು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿ, ಮಾತನಾಡಿದರು.

ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ಪವರ್ ಫೋಕಸ್ ನ್ಯೂಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಅವರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿ, ಶಂಬುಲಿಂಗ ಅವರ ಚಿಕಿತ್ಸೆ ಗೆ ಸಹಾಯ ಮಾಡಿ ಜೀವನ ಉಳಿಸುವಂತೆ ವಿನಂತಿ ಮಾಡಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಪತ್ರದಲ್ಲಿ, ಶಂಬುಲಿಂಗ ಅವರ ಕುಟುಂಬದ ದಯನೀಯ ಸ್ಥಿತಿಯನ್ನು ಎಳೆಎಳೆಯಾಗಿ ವಿವರಿಸಲಾಯಿತು. 15 ಲಕ್ಷಕ್ಕೂ ಅಧಿಕ ವೆಚ್ಚದ ಚಿಕಿತ್ಸೆ ಭರಿಸಲು ಅಸಹಾಯಕವಾಗಿರುವ ಕುಟುಂಬಕ್ಕೆ ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಯಿಂದ ತಕ್ಷಣವೇ ಧನಸಹಾಯ ನೀಡುವಂತೆ ಒತ್ತಾಯಿಸಲಾಗಿದೆ .

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ ಅವರು , ಪತ್ರಿಕಾ ವಿತರಕರೊಬ್ಬರ ಜೀವ ಉಳಿಸಲು ಆಡಳಿತಾತ್ಮಕವಾಗಿ ಕೂಡಲೇ ಸ್ಪಂದಿಸುವಂತೆ ಮತ್ತು ಚಿಕಿತ್ಸಾ ವೆಚ್ಚಕ್ಕೆ ಸರಕಾರದಿಂದ ಆಸರೆ ನೀಡಬೇಕೆಂದು ಕೋರಿಕೆ ಇಡಲಾಗಿದೆ .

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರಿಗೂ ಮನವಿ ಪತ್ರ ನೀಡಲಾಯಿತು. “ಪತ್ರಿಕಾ ವಿತರಕರು ಮಾಧ್ಯಮ ಕ್ಷೇತ್ರದ ಬೆನ್ನೆಲುಬು, ಅವರ ಆರೋಗ್ಯ ರಕ್ಷಣೆಗೆ ಸರ್ಕಾರವು ಮಾನವೀಯ ನೆಲೆಯಲ್ಲಿ ಧಾವಿಸಬೇಕು,” ಎಂದು ಈ ಸಂದರ್ಭದಲ್ಲಿ ಬಂಗ್ಲೆ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರಲ್ಲದೆ,

ಕೇವಲ ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲದೆ, ಶಂಬುಲಿಂಗ ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ಬೆಂಬಲ ಕೋರಿಯೂ ಮನವಿ ಮಾಡಲಾಯಿತು. ‘ಕನ್ನಡ ಪ್ರಭ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಪ್ರಭು ಹೆಗಡೆ ಅವರಿಗೆ ವಿಡಿಯೋ ಮೂಲಕ ವಿನಂತಿ ಸಲ್ಲಿಸಿದ ಬಂಗ್ಲೆ ಮಲ್ಲಿಕಾರ್ಜುನ್ , ದಶಕಗಳಿಂದ ಪತ್ರಿಕೆಯ ಏಜೆಂಟ್ ಆಗಿ ಸೇವೆ ಸಲ್ಲಿಸಿರುವ ಶಂಬುಲಿಂಗ ಅವರಿಗೆ ಸಂಸ್ಥೆಯ ವತಿಯಿಂದಲೂ ಆರ್ಥಿಕ ಸಹಕಾರ ನೀಡುವಂತೆ ಕಳಕಳಿಯಿಂದ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *