
ಹಿರಿಯೂರು :
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಕಡೆಗಣಿಸಿ, ಸರ್ಕಾರ ತನ್ನದೇ ಆದ ಮೀಸಲಾತಿ ನೀತಿ ಪ್ರಕಟಿಸಿದ್ದು, ಇದರಿಂದ ಮಾದಿಗರಿಗೆ ತೀವ್ರ ಅನ್ಯಾಯ ಆಗಿದೆ, ರಾಜ್ಯ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂಬುದಾಗಿ ಆದಿಜಾಂಬವಮಠದ ಷಡಕ್ಷರಮುನಿ ಸ್ವಾಮೀಜಿ ಹೇಳಿದರು.

ಮಾದಿಗರಿಗೆ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ ಸೋಮವಾರ ಸಂಜೆ ಹಿರಿಯೂರು ತಲುಪಿದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿ ನಗರದ ಮುಖ್ಯರಸ್ತೆಯಲ್ಲಿ ನೂರಾರು ಜನರ ಜೊತೆ ಹೆಜ್ಜೆ ಹಾಕಿದ ಶ್ರೀಗಳು ನಗರದ ಹೃದಯ ಭಾಗದಲ್ಲಿರುವ ಚಮ್ಮಾರಿಕೆ ಅಂಗಡಿಗೆ ಭೇಟಿ ನೀಡಿ, ಚಪ್ಪಲಿ ರಿಪೇರಿ ಮಾಡುವ ಮೂಲಕ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿ, ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ಯಾಯಕ್ಕೆ ಒಳಗಾಗಿರುವ ಮಾದಿಗರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡದೆ ಸತಾಯಿಸುವ ಕೆಲಸ ಮಾಡುತ್ತಿದೆ, ಸರ್ಕಾರದ ಈ ನಡೆ ಸರಿಯಲ್ಲ ತಟ್ಟೆ ಇದೆ ಅನ್ನ ಇದೆ ಬಡಿಸಲು ನಿಮಗೆ ಮನಸ್ಸಿಲ್ಲ, ನೊಂದವರ ಕೂಗು ನಿಮಗೆ ಕೇಳಿಸುತ್ತಿಲ್ಲವೇ ಎಂಬುದಾಗಿ ಪ್ರಶ್ನಿಸಿದರು.

ನಿಮಗೆ ನಿಮ್ಮ ಪಕ್ಷದ ಹಿತವೇ ಮುಖ್ಯವಾಗಿದ್ದು, ಬೀದಿಗೆ ಬಿದ್ದಿರುವ ಮಾದಿಗರ ನೋವು ಅರ್ಥವಾಗದೆ ಹೋಗಿದೆ. ರಾಜ್ಯ ಸರ್ಕಾರ ತಮ್ಮ ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಂಡು ಬುಗುರಿ ಆಟ ಆಡಿದರೆ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ, ಮಾದಿಗರ ಶಾಪ ಖಂಡಿತ ತಟ್ಟಲಿದೆ ಎಂಬುದಾಗಿ ಆಕ್ರೋಶ ಹೊರಹಾಕಿದರು.
ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಸಿಹಿಸುದ್ದಿ ನೀಡಿದರೆ ಸಮುದಾಯ ಸ್ವಾಗತಿಸಲಿದೆ ಇಲ್ಲದಿದ್ದರೆ ತಿರುಗಿ ಬೀಳುವುದು ನಿಶ್ಚಿತ ಎಂಬುದಾಗಿ ಎಚ್ಚರಿಸಿದ ಅವರು ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು, ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಸರ್ಕಾರ ಒಳಮೀಸಲು ಜಾರಿಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಪಕ್ಷಾತೀತವಾಗಿ ಸಮುದಾಯ ಕೈಜೋಡಿಸಬೇಕು ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯ, ಕಾಂಗ್ರೆಸ್ ಮುಖಂಡರಾದ ಜಿ.ಎಲ್.ಮೂರ್ತಿ, ದಲಿತ ಮುಖಂಡರಾದ ಕೆ.ಪಿ.ಶ್ರೀನಿವಾಸ್, ಘಾಟ್ ರವಿ, ಖಂಡೇನಹಳ್ಳಿ ಡಿ.ಚಿದಾನಂದ, ನಿವೃತ್ತ ಸೈನಿಕ ಡಿ.ಎಂ.ಯೋಗೇಶ್, ವಕೀಲ ಪ್ರಕಾಶ್, ಓಂಕಾರ್, ಬೋರನಕುಂಟೆಕರಿಯಣ್ಣ, ಡಾ.ಜೆ.ಆರ್.ಸುಜಾತ, ಲಿಂಗರಾಜ್, ರಾಘು, ದೇವರಾಜ್ ಮೇಟಿಕುರ್ಕೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ರಂಗಸ್ವಾಮಿ, ಶಿವು, ಪ್ರದೀಪ್, ಇತರರು ಉಪಸ್ಥಿತರಿದ್ದರು.
