
ಹಿರಿಯೂರು:
ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಗುರುವಾರ ರಾತ್ರಿ ಕರ್ಪೂರದಾರತಿ ವೈಭವದಿಂದ ನಡೆಯಿತು. ರಥಾರೂಢನಾದ ಶ್ರೀ ತೇರುಮಲ್ಲೇಶ್ವರಸ್ವಾಮಿಯನ್ನು ಗುಡಿ ತುಂಬಿಸಿದ ನಂತರ ರಾತ್ರಿ 8ಕ್ಕೆ ಆರಂಭವಾದ ಕರ್ಪೂರದಾರತಿ ಧಾರ್ಮಿಕ ಕಾರ್ಯದಲ್ಲಿ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ದೇಗುಲದ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳು ಕರ್ಪೂರ ಹಚ್ಚಿದರು.
ಶ್ರೀ ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ, ಉಮಾಮಹೇಶ್ವರಸ್ವಾಮಿ ರಥೋತ್ಸವದ ನಂತರ, ದೇಗುಲದ ಆವರಣದ 56 ಅಡಿ ಎತ್ತರದ ಸ್ತಂಭದ ಮೇಲೆ ಕರ್ಪೂರದ ದೀಪ ಹಚ್ಚಿದ ನಂತರ, ನೆರೆದಿದ್ದ ಭಕ್ತರು ದೇವಸ್ಥಾನದ ಸುತ್ತ ಕರ್ಪೂರದ ರಾಶಿ ಹಾಕಿ ಹಚ್ಚಿದಾಗ ಇಡೀ ಆವರಣ ಬೆಳಕಿನಿಂದ ಝಗಮಗಿಸಿತು. ಕಾರ್ತಿಕ ಮಾಸ ಮತ್ತು ಜಾತ್ರೆ ಸಂದರ್ಭದಲ್ಲಿ ದೀಪ ಹಚ್ಚುವ ಸಂಪ್ರದಾಯ ನೂರಾರು ವರ್ಷದಿಂದ ನಡೆದು ಬಂದಿದೆ.

ದೇಗುಲದ ಗರ್ಭಗುಡಿ ಮುಂಭಾಗದಲ್ಲಿ 58ಅಡಿ ಎತ್ತರದ ಸ್ತಂಭ ಮತ್ತು 20ಅಡಿ ಎತ್ತರದ ಬಸವಣ್ಣ ದೇವರ ಏಕಶಿಲಾ ದೀಪ ಸ್ತಂಭದ ತುದಿಯಲ್ಲಿ 8 ಲೋಹದ ದೀಪಗಳಿದ್ದು, ಅವುಗಳಿಗೆ ಎಣ್ಣೆ ಮತ್ತು ಕರ್ಪೂರ ಹಾಕಿ ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದೀಪ ಹಚ್ಚಲಾಯಿತು.
ಸುಮಾರು 600 ವರ್ಷಗಳ ಹಿಂದೆ ಹಿರಿಯೂರು ಪ್ರಾಂತ್ಯ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರರು ತಮ್ಮ ಭಕ್ತಿ ಮತ್ತು ಶೌರ್ಯದ ಪ್ರತೀಕವಾಗಿ ಧಾರ್ಮಿಕ ಆಚರಣೆ ಜಾರಿಗೆ ತಂದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಕರ್ಪೂರದಾರತಿ ದಕ್ಷಿಣ ಭಾರತದಲ್ಲಿ ವಿಶಿಷ್ಠ ಆಚರಣೆಯಾಗಿದೆ.

ಬಯಲುಸೀಮೆ ಜನರ ಆರಾಧ್ಯ ದೈವ ತೇರುಮಲ್ಲೇಶ್ವರಸ್ವಾಮಿ ಉತ್ತಮ ಮಳೆ,ಬೆಳೆ, ಸುಖ-ಸಮೃದ್ಧಿ ಕರುಣಿಸಲೆಂದು ಪ್ರತಿ ವರಷ ಜಾತ್ರೆ ಸಂದರ್ಭದಲ್ಲಿ ಕರ್ಪೂರ ಹಚ್ಚುವ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗಿದೆ, ದೀಪದ ಬೆಳಕು 4-5 ಕಿಲೋಮೀಟರ್ ದೂರದ ವರೆಗೆ ಕಾಣುತ್ತದೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್, ಜಾತ್ರೋತ್ಸವ ಸೇವಾ ಸಮಿತಿ ಅಧ್ಯಕ್ಷರಾದಅನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಆರ್. ನಾಗೇಂದ್ರನಾಯ್ಕ್, ಅರ್ಚಕ ವಿಶ್ವನಾಥಾಚಾರ್, ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಟಿ.ಚಂದ್ರಶೇಖರ್, ಬಾಲಕೃಷ್ಣ, ಈ.ಮಂಜುನಾಥ್, ಗೀತಾ, ಮಮತಾ, ಶಿವರಂಜಿನಿ, ಜಿ.ಎಲ್.ಮೂರ್ತಿ, ದಿವುಶಂಕರ್, ಕಲ್ಲಹಟ್ಟಿಹರೀಶ್, ಜಿ.ಪ್ರೇಮ್ ಕುಮಾರ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಪಿ.ಎಸ್.ಸಾದತ್ ವುಲ್ಲಾ, ಜಿ.ದಾದಾಪೀರ್ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

