
ಹಿರಿಯೂರು:
ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ನವಂಬರ್ 2ರ ಭಾನುವಾರದಂದು ಶ್ರೀ ವೀರಮಾಳೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಎಲ್ಲಾ ಹೊನ್ನುಂಗುರುದ ಅಣ್ಣತಮ್ಮಂದಿರನ್ನು ಒಳಗೊಂಡ ವಿಶೇಷ ಸಾಮಾನ್ಯ ಸಭೆಯನ್ನು ಆಯೋಜನೆ ಮಾಡಿ, ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಶ್ರೀಸ್ವಾಮಿಯ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 2018-19 ರಿಂದ 2024-25ನೇ ಸಾಲಿನವರೆಗೆ ಗುಡಿಕಟ್ಟಿನ ಅಣ್ಣ-ತಮ್ಮಂದಿರ ವಿತುನದ ಹಣ ಹಾಗೂ ದೇಣಿಗೆ ಹಣದ ಜಮಾ ಮತ್ತು ಖರ್ಚು ವಿಚಾರಗಳನ್ನು ಎಲ್ಲರ ಸಮ್ಮುಖದಲ್ಲಿ ಚರ್ಚಿಸಲಾಯಿತು.
ಸದರಿ ವಿಚಾರಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಹಣದ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಸಭೆಯಲ್ಲಿ ಕಂಡು ಬಂದಿರುವುದರಿಂದ ಎಲ್ಲರ ಸಮ್ಮುಖದಲ್ಲಿ ತಕ್ಷಣದಿಂದಲೇ ಹಳೆಯ ಕಮಿಟಿಯನ್ನು ರದ್ದುಪಡಿಸಿ ಸಂಬಂಧಪಟ್ಟ ವ್ಯಕ್ತಿಗಳು ದುರುಪಯೋಗವಾಗಿರುವ ಹಣವನ್ನು ಹಿಂದಿರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂದುವರೆದು ಚರ್ಚೆ ನಡೆಸಿದ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ 23ಗ್ರಾಮಗಳ ಹೊನ್ನುಂಗುರುದ ಅಣ್ಣತಮ್ಮಂದಿರು ಸೇರಿ ಕಮಿಟಿಗೆ ನೂತನ ಸದಸ್ಯರುಗಳನ್ನು ಆಯ್ಕೆ ಮಾಡಿ, ಕಾನೂನಾತ್ಮಕವಾಗಿ ನೋಂದಣಿ ಮಾಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೊನ್ನುಂಗುರುದ ಕಮಿಟಿಗೆ ನೂತನ ಗೌರವಾಧ್ಯಕ್ಷರಾಗಿ ಎಸ್.ರಮೇಶ್, ಅಧ್ಯಕ್ಷರಾಗಿ ಬಿ.ಲೋಕೇಶ್, ಉಪಾಧ್ಯಕ್ಷರಾಗಿ ರವಿಶಂಕರ್, ಪ್ರಧಾನ ಕಾರ್ಯದರ್ಶಿ ಆರ್.ಸದಾಶಿವಯ್ಯ ಹಾಗೂ ಸದಸ್ಯರುಗಳಾಗಿ ರಾಮಕೃಷ್ಣಪ್ಪ, ಅಜ್ಜಣ್ಣ, ಶುಭಕರ, ದೊಡ್ಡಮಾಳಪ್ಪ , ಕಾಂತರಾಜು, ಕುಮಾರಪ್ಪ, ಈಶ್ವರಪ್ಪ(ರೈಲ್ವೆ), ಜಡಿಯಪ್ಪ, ವೀರೇಶ್, ಹನುಮೇಶ್, ಮಂಜಣ್ಣ, ಕೃಷ್ಣಪ್ಪ ಮತ್ತು ವಿಜಯ್ ಕುಮಾರ್ ಇವರುಗಳನ್ನು ಆಯ್ಕೆ ಮಾಡಲಾಯಿತು.

