
ಹಿರಿಯೂರು:
ತಾಲ್ಲೂಕಿನ ವಿವಿಧ ಭಾಗಗಳ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕ್ರಮಕೈಗೊಳ್ಳಬೇಕು ಎಂಬುದಾಗಿ ಜೆ.ಡಿ.ಎಸ್. ಹಿರಿಯ ಮುಖಂಡರಾದ ಎಂ.ರವೀಂದ್ರಪ್ಪ ಅವರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಹೋಬಳಿ ಕೇಂದ್ರವಾದ ಧರ್ಮಪುರ ಗ್ರಾಮದಲ್ಲಿ ಮುಖ್ಯರಸ್ತೆಯುದ್ಧಕ್ಕೂ ಬೃಹತ್ ಗುಂಡಿಗಳು ಬಿದ್ದಿದ್ದು, ಈ ಗುಂಡಿಗಳ ತುಂಬಾ ನೀರು ನಿಂತು ಕೇಸರು ಗದ್ದೆಯಂಟಾಗಿದೆ. ಅಧಿಕಾರಿಗಳು ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದ್ದಾರೆ. ವಯಸ್ಸಾದವರು, ವಾಹನಸವಾರರು ಹಾಗೂ ರಾತ್ರಿ ವೇಳೆ ಓಡಾಡುವಾಗ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ.

ನಮ್ಮ ರಾಜ್ಯ ಸರ್ಕಾರ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗಿದ್ದು, ಐದು ಗ್ಯಾರಂಟಿಗಳ ಜೊತೆಗೆ ಗುಂಡಿಭಾಗ್ಯವನ್ನು ಗ್ಯಾರಂಟಿ ಯೋಜನೆಯಲ್ಲಿ ಸೇರಿಸಿಕೊಂಡು ರಾಜ್ಯದ ಎಲ್ಲೆಡೆ ಸಾರ್ವಜನಿಕರ ತೊಂದರೆಗೆ ಕಾರಣವಾಗಿದೆ ಎಂಬುದಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಧರ್ಮಪುರ, ಮಸ್ಕಲ್, ಬಬ್ಬೂರು, ಓಬೇನಹಳ್ಳಿ ಗೇಟ್ ವೇದಾವತಿ ಸೇತುವೆ ಮೇಲೆ ಗುಂಡಿಗಳದೇ ದರ್ಬಾರು, ಪ್ರಾಣವನ್ನು ಕೈಯಲ್ಲಿಯೇ ಹಿಡಿದುಕೊಂಡೇ ಸಂಚಾರ ಮಾಡುವ ವಾಹನ ಸವಾರಿಗೆ ತೀವ್ರವಾದ ತೊಂದರೆಯಾಗಿದ್ದು, ವಾಹನ ಸವಾರರಿಗೆ ಮನೆಗೆ ಹೋಗುವುದೇ ಕಷ್ಟಕರವಾಗಿದೆ.

ಮಳೆ ಸುರಿದರೆ ರಸ್ತೆ ಗುಂಡಿಗಳಲ್ಲಿ ಸಂಪೂರ್ಣ ನೀರು ತುಂಬಿಕೊಂಡು ಗುಂಡಿಗಳು ಕಾಣದಂತಾಗುತ್ತವೆ. ಈ ಸಂದರ್ಭದಲ್ಲಿ ಸಂಚರಿಸುವ ಬೈಕ್ ಸವಾರರು ಗುಂಡಿಯೊಳಗೆ ಬಿದ್ದು, ಮತ್ತೆ ಎದ್ದು ಏನೂ ಆಗದಿರುವಂತೆ ಹೋಗುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ.
ಇನ್ನು ಕತ್ತಲಾದರೆ ಕೆಲವು ಈ ಮಾರ್ಗದ ಸಂಚಾರವೇ ಕಷ್ಟವಾಗಿದೆ. ಇನ್ನು ನಗರದ ರಸ್ತೆ ಅಗಲೀಕರಣ ಕಾಮಗಾರಿ ಕೂಡ ಆಮೆಗತಿಯಲ್ಲಿ ಸಾಗುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಹೇಳಿದಂತೆ ನಡೆದುಕೊಂಡಾಗ ಮಾತ್ರ ಈ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ ಎಂಬುದಾಗಿ ಅವರು ಹೇಳಿದರು.
