October 27, 2026
000002

ಹಿರಿಯೂರು :

ಜನರು ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು, ಮಹರ್ಷಿವಾಲ್ಮೀಕಿಯವರ ಜಯಂತಿ ಆಚರಿಸುವುದರ ನಿಜವಾದ ಉದ್ದೇಶ ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದಲ್ಲ,ಅವರು ಸಾರಿದ ಮೌಲ್ಯಗಳನ್ನು ನಾವು ನೀವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಸಮಾಜದ ಜನರು ಜಾತಿ, ಧರ್ಮ, ಭಾಷೆ ಮತ್ತು ವರ್ಗದ ಭೇದಭಾವಗಳನ್ನು ಮರೆತು ಎಲ್ಲರನ್ನೂ ಸಮಾನವಾಗಿ ಗೌರವಿಸುವ ಸಮಾಜವನ್ನು ನಿರ್ಮಿಸುವುದು ನಮ್ಮನಿಮ್ಮೆಲ್ಲರ ಕರ್ತವ್ಯವಾಗಿದೆ. ನಾವು ನಮ್ಮ ಮಕ್ಕಳಿಗೆ ಇಂತಹ ಮಹಾನ್ ವ್ಯಕ್ತಿಗಳ ಇತಿಹಾಸವನ್ನು ತಿಳಿಸಬೇಕು. ಅವರಲ್ಲಿ ಶಿಕ್ಷಣದ ಆಸಕ್ತಿ, ಮಾನವೀಯತೆ, ಶಿಸ್ತು, ಸತ್ಯನಿಷ್ಠೆ ಮತ್ತು ಸಮಾಜಸೇವೆಯ ಮನೋಭಾವವನ್ನು ಬೆಳೆಸಬೇಕು ಆಗ ಮಾತ್ರ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜೆ.ದಿನೇಶ್ ರವರು ಪ್ರಸ್ತಾವಿಕ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಶಿಕ್ಷಣವಂತ, ಸಮಾನತೆಯುಳ್ಳ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂಬುದಾಗಿ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಮತ್ತು ವಾಲ್ಮೀಕಿ ಸಮುದಾಯಭವನ ನಿರ್ಮಾಣಕ್ಕೆ ಜಾಗ ಕೊಡುವಂತೆ ಮಾಜಿ ಸಚಿವರಾದ ದಿ.ಡಿ.ಸುಧಾಕರ್ ರವರಿಗೆ ಈಗಾಗಲೇ ಮನವಿ ಮಾಡಿದ್ದು, ಇದನ್ನು ಕಾರ್ಯರೂಪಕ್ಕೆ ತರುವಂತೆ ವಾಲ್ಮೀಕಿ ಸಮಾಜಕ್ಕೆ ಶೇಕಡ 7% ಮೀಸಲಾತಿ ಕಲ್ಪಿಸುವಂತೆ, ವಾಲ್ಮೀಕಿ ಸಮುದಾಯದ ವತಿಯಿಂದ ತಾಲ್ಲೂಕು ತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ರವರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರುವಂತಿಲ್ಲ, ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ಕೊಡುವಂತಿಲ್ಲ, ಚುನಾವಣಾ ನೀತಿ ಸಂಹಿತ ಮುಗಿದ ನಂತರ ನಿಮ್ಮ ಮನವಿಯನ್ನು ಪರಿಶೀಲಿಸಲಾಗುವುದು ಎಂಬುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಪೌರಾಯುಕ್ತರಾದ ಎ.ವಾಸಿಂ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಮೂರ್ತಿ,  ವಾಲ್ಮೀಕಿ ಸಮಾಜದ ಮುಖಂಡರಾದ ಬಸವರಾಜ ನಾಯಕ್, ವಾಲ್ಮೀಕಿ ಮಹಾಸಭಾಧ್ಯಕ್ಷರಾದ ಮಂಜುನಾಥ್ ಮಾಳಿಗೆ, ಮುಖಂಡರುಗಳಾದ ಲೋಕೇಶ್ ಮಾಳಿಗೆ, ಜೋಗಪ್ಪ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಮಸ್ಕಲ್, ಮಂಜುನಾಥ್ ಮೇಟಿಕುರ್ಕೆ, ದೇವರಾಜ್, ಮಿಲ್ಕ್ ತಿಪ್ಪೇಸ್ವಾಮಿ, ರಾಜು ಮಸ್ಕಲ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ವಾರ್ಡನ್ ಮಹಮದ್ ಫಯಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಅಭಿಷೇಕ್ ವಂದನಾರ್ಪಣೆ ನೆರವೇರಿಸಿದರು.

About The Author

Leave a Reply

Your email address will not be published. Required fields are marked *