October 27, 2026
006

ಹಿರಿಯೂರು:

ಹಿರಿಯೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತವಾಗಿದ್ದು, ತಾಲ್ಲೂಕು ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಇತರ ಪದಾಧಿಕಾರಿಗಳು, ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ ಅಜೀವ ಸದಸ್ಯರ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಂಘಟನೆ ಕಾರ್ಯದರ್ಶಿಗಳಾದ ಗಡಾರಿ ಕೃಷ್ಣಪ್ಪ ಆಗ್ರಹಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಪದಾಧಿಕಾರಿಗಳು, ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ ಅಜೀವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚರ್ಚೆಯ ಮೂಲಕ ತೀರ್ಮಾನ ಕೈಗೊಳ್ಳುವುದು ಅಗತ್ಯವಾಗಿದೆ. ಆದರೆ, ಹಿರಿಯೂರು ತಾಲ್ಲೂಕು ಘಟಕದಲ್ಲಿ ಈ ರೀತಿಯ ಯಾವುದೇ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಪಾಲನೆಯಾಗುತ್ತಿಲ್ಲ ಎಂಬುದಾಗಿ ಅವರು ಆಕ್ಷೇಪಿಸಿದ್ದಾರೆ.

ಈ ಹಿಂದೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಖರ್ಚುವೆಚ್ಚಗಳನ್ನು ಸಭೆ ಕರೆದು ಇದುವರೆಗೂ ಎಲ್ಲಾ ಸದಸ್ಯರ ಮುಂದೆ ಸಮರ್ಪಕವಾಗಿ ಒದಗಿಸಲಾಗಿಲ್ಲ ಎಂಬ ಆರೋಪವಿದ್ದು, ಆದಾಯ ಮತ್ತು ವೆಚ್ಚದ ಸಂಪೂರ್ಣ ವಿವರಗಳನ್ನು ಸದಸ್ಯರ ಮುಂದಿಡಬೇಕು. ಸಂಸ್ಥೆಯ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಐಮಂಗಲ ಹೋಬಳಿ ಘಟಕದ ಸಮ್ಮೇಳನ ಆಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕು ಘಟಕದ ಪದಾಧಿಕಾರಿಗಳು, ಹೋಬಳಿ ಘಟಕದ ಅಧ್ಯಕ್ಷರು ಹಾಗೂ ಅಜೀವ ಸದಸ್ಯರ ಗಮನಕ್ಕೆ ತಂದು ಚರ್ಚೆ ನಡೆಸಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಸಂಬಂಧಪಟ್ಟವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯಕ್ರಮದ ಕುರಿತು ಅವರವರೇ ನಿರ್ಧಾರ ಕೈಗೊಂಡಿದ್ದರೆ, ಅದರ ಕಾರಣವನ್ನು ಸಭೆ ಕರೆದು ಸ್ಪಷ್ಟಪಡಿಸಬೇಕು ಎಂದು ಗಡಾರಿ ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದಿಂದ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಸಮ್ಮೇಳನ ಅಥವಾ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಅನ್ವಯಿಸುವ ನಿಯಮಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸಬೇಕು. ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಘಟಕದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನೂ ತಿಳಿಸಬೇಕು ಎಂದು ಆಗ್ರಹಿಸಲಾಗಿದೆ.

ತಾಲ್ಲೂಕಿನ ವಿವಿಧ ಪಕ್ಷಗಳ ಹಲವು ರಾಜಕೀಯ ಮುಖಂಡರಿಂದ ಇಂತಹ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆಯೂ ಸ್ಪಷ್ಟನೆ ನೀಡುವುದು ಅಗತ್ಯವಾಗಿದೆ. ಸಂಗ್ರಹಿಸಲಾದ ಹಣದ ಮೊತ್ತ, ಅದರ ಉದ್ದೇಶ, ವೆಚ್ಚದ ವಿವರ ಹಾಗೂ ಸಂಬಂಧಿತ ಲೆಕ್ಕಪತ್ರಗಳನ್ನು ಸದಸ್ಯರೆಲ್ಲರಿಗೂ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ವ್ಯಕ್ತಿಯ ವೈಯಕ್ತಿಕ ನಿರ್ಧಾರಗಳಿಗಿಂತ ಸದಸ್ಯರ ಸಹಭಾಗಿತ್ವ, ಪಾರದರ್ಶಕ ಆಡಳಿತ ಮತ್ತು ಕನ್ನಡದ ಸೇವೆಗೆ ಆದ್ಯತೆ ನೀಡುವ ಸಂಸ್ಥೆಯಾಗಿರಬೇಕು. ಆದ್ದರಿಂದ ತಾಲ್ಲೂಕು ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಈ ಎಲ್ಲ ವಿಚಾರಗಳ ಕುರಿತು ಸ್ಪಷ್ಟನೆ ನೀಡಿ, ಪದಾಧಿಕಾರಿಗಳು, ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ ಅಜೀವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕಾರ್ಯಚಟುವಟಿಕೆಗಳನ್ನು ನಡೆಸಬೇಕು ಎಂದು ಗಡಾರಿಕೃಷ್ಣಪ್ಪ ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *