October 24, 2026
00005

ಹಿರಿಯೂರು :

ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಹೈಸ್ಕೂಲ್ ಮುಂಭಾಗದಲ್ಲಿರುವ ಹಂಪ್‌ಗೆ ಹಾಕಲಾಗಿದ್ದ ಬಿಳಿ ಬಣ್ಣ ಅಳಿಸಿಹೋಗಿರುವುದರಿಂದ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಂಪ್ ಸರಿಯಾಗಿ ಕಾಣಿಸುತ್ತಿಲ್ಲ. ಇದರಿಂದ ಇತ್ತೀಚಿನ ದಿನಗಳಲ್ಲಿ ಹಲವು ವಾಹನಗಳು ಅಪಘಾತಕ್ಕೀಡಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ನಿನ್ನೆ ರಾತ್ರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಮೈಸೂರಿನಿಂದ ಶಿರಡಿಗೆ ತೆರಳುತ್ತಿದ್ದ 21 ಪ್ರಯಾಣಿಕರಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಗಮನಹರಿಸುವ ಅಗತ್ಯವಿದ್ದು, ಮಳೆ ಮತ್ತು ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಹಂಪ್ ಕಾಣದೆ ಆಗುತ್ತಿರುವ ಅಪಘಾತಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು

ಶಾಲೆಯ ಮುಂಭಾಗದಲ್ಲಿರುವ ಈ ಹಂಪ್‌ ನ ಬಣ್ಣ ಮಾಸಿರುವುದರಿಂದ, ಶಾಲೆಗೆ ಬರುವ ವಿದ್ಯಾರ್ಥಿಗಳು ಓಡಾಡುವಾಗ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ, ವಿಶೇಷವಾಗಿ ರಾತ್ರಿ ಮತ್ತು ಮಳೆಯ ಸಮಯದಲ್ಲಿ ವಾಹನ ಚಾಲಕರಿಗೆ ಹಂಪ್ ಗುರುತಿಸಲು ಕಷ್ಟವಾಗುತ್ತಿದೆ. ಇದರಿಂದ ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಹಂಪ್‌ಗೆ ಸ್ಪಷ್ಟವಾಗಿ ಕಾಣುವ ಬಿಳಿ ಬಣ್ಣವನ್ನು ಬಳಿಯಬೇಕು. ಹಂಪ್ ಇರುವ ಸ್ಥಳದಲ್ಲಿ ಇಂಡಿಕೇಟರ್ ಲೈಟ್‌ಗಳನ್ನು ಅಳವಡಿಸಬೇಕು. ಹಂಪ್‌ ಗಿಂತ ಸಾಕಷ್ಟು ದೂರದಲ್ಲಿಯೇ ವಾಹನ ಚಾಲಕರಿಗೆ ಮುನ್ನೆಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ಅಳವಡಿಸಿ,ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಮರುಕಳಿಸದಂತೆ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ತಕ್ಷಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.

ವಾಹನ ಸವಾರರು ಹಾಗೂ ಪ್ರಯಾಣಿಕರ ಅಮೂಲ್ಯವಾದ ಜೀವಗಳನ್ನು ರಕ್ಷಿಸುವುದು ಸಂಬಂಧಪಟ್ಟ ಇಲಾಖೆಗಳ ಆದ್ಯ ಕರ್ತವ್ಯವಾಗಿದೆ. ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು, ಅಪಘಾತ ಸಂಭವಿಸುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ವಹಿಸಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *