
ಹಿರಿಯೂರು :
ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಆಡಳಿತ ಮತ್ತು ಕಾನೂನುಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ಧೀರ ಮಹಿಳೆ, ಇವರ ದೇಶಭಕ್ತಿ, ದೇಶಕ್ಕಾಗಿ ಹೋರಾಡುವ ಅವರ ಮನೋಭಾವ ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂಬುದಾಗಿ ಉಪತಹಶೀಲ್ದಾರರಾದ ತಿಪ್ಪೇಸ್ವಾಮಿ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಕಿತ್ತೂರಿನ ಸ್ವಾತಂತ್ರ್ಯ ಹಾಗೂ ಜನರ ರಕ್ಷಣೆಗಾಗಿ ದಿಟ್ಟತನದಿಂದ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಮುಂದಾದ ರಾಣಿ ಚೆನ್ನಮ್ಮ ಅವರ ಧೈರ್ಯ, ಸಾಹಸ ಮತ್ತು ಹೋರಾಟದ ಗುಣಗಳು ಮಹಿಳೆಯರಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಆದರ್ಶ ಪ್ರಾಯವಾಗಿದೆ ಎಂಬುದಾಗಿ ಹೇಳಿದರು.
ಉಪನ್ಯಾಸಕರಾದ ಟಿ.ಎಸ್.ಪ್ರಸಾದ್ ರವರು ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನ ಚರಿತ್ರೆಯನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ನಾಗೇಂದ್ರ, ಪೊಲೀಸ್ ಇಲಾಖೆಯ ಚಂದ್ರಪ್ಪ, ಶಿಕ್ಷಣ ಇಲಾಖೆಯ ಶಿವಾನಂದ, ತಾಲೂಕು ಕಚೇರಿಯ ಶ್ರೀರಂಗಮ್ಮ, ಚಂದ್ರಕಲಾ, ವೀಕ್ಷಿತ, ರಾಜಗೋಪಾಲ್, ಶ್ರೀನಿವಾಸ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
