
ಹಿರಿಯೂರು :
ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆಗಳು ಹಿರಿಯೂರು ತಾಲ್ಲೂಕಿನಲ್ಲಿ ಕಳೆದ 13 ವರ್ಷಗಳಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎನ್.ಸಂತೋಷ್ ಹೆಗಡೆ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಯಶಸ್ವಿಯಾಗಿ 13ನೇ ಬಾರಿಗೆ ಅರ್ಜಿ ಸ್ವೀಕರಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ “ಪ್ರತಿಭಾಪುರಸ್ಕಾರ” ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ದೇಶದ ಭಾವೀ ಪ್ರಜೆಗಳಾಗಿದ್ದು, ನೀವುಗಳು ದುರಾಸೆಯಿಂದ ದೂರವಿರಬೇಕು, ಜೀವನದಲ್ಲಿ ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಆದರ್ಶ ಸಮಾಜವನ್ನು ನಿರ್ಮಾಣ ಮಾಡಬೇಕು, ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬುದಾಗಿ ಹೇಳಿದರು.
ನಾನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶನಾಗಿ ಮರಣ ದಂಡನೆಯಂತಹ ಶಿಕ್ಷೆಯನ್ನು ಸಹ ನೀಡಿದ್ದೇನೆ, ಆದರೆ ಲೋಕಾಯುಕ್ತನಾಗಿ ಕಾರ್ಯ ನಿರ್ವಹಿಸುವಾಗ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರ ಬೇರೆಲ್ಲೂ ಇಲ್ಲ ಅನ್ನಿಸಿತು, ಸಾರ್ವಜನಿಕರಿಗೆ ಬಳಕೆಯಾಗಬೇಕಾದ ಕೋಟ್ಯಾಂತರ ರೂಪಾಯಿ ಹಣ ಲೂಟಿಯಾಗಿ ಕೆಲವೇ ಕೆಲವು ಅಧಿಕಾರಿಗಳ ಖಾತೆಗೆ ಸೇರಿರುವುದು ಕಂಡು ನಿಜಕ್ಕೂ ಬೇಸರವಾಯಿತು ಎಂದರಲ್ಲದೆ,

ನಮ್ಮ ಪೀಳಿಗೆಯವರು ಮಾಡಿರುವ ತಪ್ಪನ್ನು ಇಂದಿನ ಯುವಪೀಳಿಗೆಯವರಾದ ನೀವುಗಳು ಸರಿಪಡಿಸುವ ಪ್ರಯತ್ನ ಮಾಡಬೇಕು, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಅನ್ಯಾಯ, ಅಕ್ರಮ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರೇರೇಪಿಸಬೇಕು, ನಿಮ್ಮ ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬುದಾಗಿ ಹೇಳಿದರು.
ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಮಾತನಾಡಿ, ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಯಿಂದ ಈ ಬಾರಿ ನಡೆಯುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ನಿವೃತ್ತ ನ್ಯಾಯಾಧೀಶರಾದ ಶ್ರೀಯುತ ಸಂತೋಷ್ ಹೆಗಡೆಯವರು ಆಗಮಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ, ವಿದ್ಯಾರ್ಥಿಗಳು ಸಂತೋಷ್ ಹೆಗಡೆಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಮಾತನಾಡಿ, ನಮ್ಮ ಹಿರಿಯೂರು ರೆಡ್ ಕ್ರಾಸ್ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು, ಕಳೆದ 13 ವರ್ಷಗಳಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿದೆ ಎಂಬುದಾಗಿ ಹೇಳಿದರು.

ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತರಾಗಿದ್ದು, ಪೋಷಕರು ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ತುಂಬುವ ಮೂಲಕ ಅವರ ಆಸಕ್ತಿಯಿರುವ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟು, ಸಮಾಜದಲ್ಲಿ ಶ್ರೇಷ್ಠವ್ಯಕ್ತಿಗಳಾಗಿ ಹೊರಹೊಮ್ಮುವಂತೆ ಮಾಡಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಛೇರ್ಮನ್ ಗಾಯತ್ರಿಶಿವರಾಂ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಅನಂತರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷರಾದ ವಸಂತ್ ಕುಮಾರ್ ವಹಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎನ್.ಸಂತೋಷ್ ಹೆಗಡೆ, ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್, ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಛೇರ್ಮನ್ ಗಾಯತ್ರಿಶಿವರಾಂ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಅನಂತರೆಡ್ಡಿ, ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ, ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ರೋಟರಿ ಕಾರ್ಯದರ್ಶಿ ಚಂದ್ರಹಾಸ್, ಖಜಾಂಚಿ ಸಣ್ಣಭೀಮಣ್ಣ, ನಾರಾಯಣಾಚಾರ್, ಸಿವಿಲ್ ಇಂಜಿನಿಯರ್ ಗಿರಿದಾಸ್, ಸಮಾಜಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್, ಗೀತಾರಾಧಾಕೃಷ್ಣನ್, ಎ.ರಾಘವೇಂದ್ರ, ಟಿ.ಮಲ್ಲೇಶಪ್ಪ, ಆಲೂರುಸಿದ್ಧರಾಮಣ್ಣ, ಮಹಾಬಲೇಶ್ವರಶೆಟ್ಟಿ, ದೇವರಾಜ್ ಮೂರ್ತಿ, ಎಲ್.ಆನಂದಶೆಟ್ಟಿ, ರಾಧಾಕೃಷ್ಣನ್, ಪಿ.ಆರ್.ಸತೀಶ್ ಬಾಬು, ಆಕಾಶವಾಣಿ ನವೀನ್ ಮಸ್ಕಲ್, ಪೋಲೀಸ್ ಭೇಟೆ ಪ್ರಸನ್ನ, ಸೇರಿದಂತೆ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀಮತಿ ಗೀತಾರಾಧಾಕೃಷ್ಣರವರು ಪ್ರಾರ್ಥಿಸಿದರು. ನಿವೃತ್ತ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.ರೆಡ್ ಕ್ರಾಸ್ ಸಂಸ್ಥೆ ಎ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಎಂ.ಎಸ್.ರಾಘವೇಂದ್ರ ವಂದನಾರ್ಪಣೆ ನೆರವೇರಿಸಿದರು.
