
ಹಿರಿಯೂರು:
ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ನಾಗರೀಕ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ನಗರದ ಸ್ವಚ್ಛತೆ ಹಾಗೂ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂಬುದಾಗಿ ಸಚಿವರಾದ ಹೆಚ್.ಸಿ.ಬಾಲಕೃಷ್ಣ ಅವರು ಹೇಳಿದರು.

ಹಿರಿಯೂರು ನಗರಸಭೆಗೆ ಇಂದು ಮುಂಜಾನೆ ಭೇಟಿ ನೀಡಿದ ಪೌರಾಡಳಿತ ಸಚಿವರಾದ ಹೆಚ್.ಸಿ.ಬಾಲಕೃಷ್ಣ ಅವರು ಪೌರಕಾರ್ಮಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಹಾಗೂ ಅಗತ್ಯತೆಗಳ ಕುರಿತು ಮಾಹಿತಿ ಪಡೆದರು. ನಂತರ ನಗರದ ತರಕಾರಿ ಮಾರುಕಟ್ಟೆ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಸ್ವಚ್ಛತೆ, ಕುಡಿಯುವ ನೀರು, ಒಳಚರಂಡಿ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಪೌರಕಾರ್ಮಿಕರು ನಗರ ಸ್ವಚ್ಛತೆಯ ಪ್ರಮುಖ ಭಾಗವಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ವಾರ್ಡ್‌ಗಳಲ್ಲಿ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ನಿರಂತರವಾಗಿ ಪರಿಶೀಲಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು”ಎಂದರಲ್ಲದೆ,

ನಗರದ ಗಾಂಧಿವೃತ್ತದಲ್ಲಿರುವ ಅಂಗಡಿಗಳಿಂದ ಅಥವಾ ಪುಟ್ ಪಾತ್ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಯಾವುದೇ ಅನಾಹುತ ಹಾನಿಗಳಾದದಲ್ಲಿ ಯಾರು ಹೊಣೆ ಮತ್ತು ನಗರದ ವೃತ್ತಗಳಲ್ಲಿ ಫುಟ್ ಪಾತ್ ನಲ್ಲಿ ವಾಹನಗಳು, ಸಾರ್ವಜನಿಕರು ಓಡಾಡಲು ಅವಕಾಶ ಕಲ್ಪಿಸಿಕೋಡಬೇಕೆಂದು ಸೂಚಿಸಿದರು.

ನಗರದ ನಾಗರೀಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಬೇಕು, ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕುಡಿಯುವನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ನಾಗರೀಕರ ಮೂಲಭೂತ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ಮೂಲಕ ನಗರದ ಅಭಿವೃದ್ಧಿಗೆಮುಂದಾಗಬೇಕು ಎಂಬುದಾಗಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪಿ.ಟಿ.ಸುನೀಲ್ ಕುಮಾರ್, ಸಹಾಯಕ ಅಭಿಯಂತರರಾದ ಎಂ.ಎಸ್.ಶ್ರೀರಂಗ, ಹಿರಿಯ ಆರೋಗ್ಯ ನೀರೀಕ್ಷಕರುಗಳಾದ ಸುನೀಲ್ ಕುಮಾರ್, ಅಶೋಕ ಕುಮಾರ್, ಕಿರಿಯ ಅಭಿಯಂತರರಾದ ಪ್ರಸನ್ನ ಕುಮಾರ್, ಕಿರಿಯ ಅಭಿಯಂತರರಾದ ದೀಪಾ, ಕಿರಿಯ ಆರೋಗ್ಯ ನೀರೀಕ್ಷಕರಾದ ಮಹಾಲಿಂಗರಾಜ್, ಹನುಮಂತರಾಜ್, ಪೌರಕಾರ್ಮಿಕರ ಸಂಘದ ಅಧ್ಯಕ್ಷರು ಸೇರಿದಂತೆ ಪೌರಕಾರ್ಮಿಕರುಗಳು ಉಪಸ್ಥಿತರಿದ್ದರು.
