
ಹಿರಿಯೂರು :
ಹಿರಿಯರ ಅನುಭವ ತುಂಬಾ ದೊಡ್ಡದು, ಸಮಾಜಕ್ಕೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ಮನೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಹಿರಿಯರೊಂದಿಗೆ ಒಡನಾಟ ಬೆಳೆಸುವ ಮೂಲಕ ಕುಟುಂಬದೊಂದಿಗೆ ಸಾಮರಸ್ಯ ಬೆಳೆಸಬೇಕು ಎಂಬುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಜಾತ ಬಿ ಸುವರ್ಣ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಹಿರಿಯ ನಾಗರೀಕರಿಗೆ ಹಮ್ಮಿಕೊಳ್ಳಲಾಗಿದ್ದ “ಕಾನೂನು ಅರಿವು” ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿರುವ ಹಿರಿಯ ನಾಗರೀಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವುದರಿಂದ ಮಕ್ಕಳು ಉತ್ತಮ ಸಂಸ್ಕಾರವಂತರಾಗಿ ಬೆಳೆಯುತ್ತಾರೆ, ಅಲ್ಲದೆ ತುಂಬಿದ ಕುಟುಂಬದಲ್ಲಿ ಬೆಳೆದ ಮಕ್ಕಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂಬುದಾಗಿ ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪಾರ್ವತಮ್ಮ ಮಾತನಾಡಿ, ಹಿರಿಯರು ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ, ಹಿರಿಯರ ಜೊತೆ ಬೆಳೆದ ಮಕ್ಕಳು ಒಳ್ಳೆಯ ಸಂಸಾರ ಕಲಿಯುತ್ತಾರೆ. ಸರ್ಕಾರ ಹಿರಿಯ ನಾಗರೀಕರ ರಕ್ಷಣೆ ಮತ್ತು ಪೋಷಣೆಗಾಗಿ ಹಿರಿಯ ನಾಗರೀಕರ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರಲ್ಲದೆ,
ಹಿರಿಯ ನಾಗರೀಕರೆಂದರೆ ವಯಸ್ಸಾದವರು ಮಾತ್ರವಲ್ಲ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿರುವವರು ಕೂಡ ಹೌದು, ಹಿರಿಯ ನಾಗರೀಕರು ಭಾವನಾತ್ಮಕ ಜೀವಿಗಳಾಗಿದ್ದು, ಬುದ್ಧಿವಂತಿಕೆಯಿಂದ ಮುಂದಿನ ಬದುಕನ್ನು ರೂಪಿಸಿಕೊಳ್ಳಬೇಕಲ್ಲದೆ, ನಿಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂಬುದಾಗಿ ಹೇಳಿದರು.
ಕಾನೂನು ಸಲಹೆಗಾರ ಎ.ಮಹಾಲಿಂಗಪ್ಪ ಮಾತನಾಡಿ, ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬುವುದರಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಲ್ಲಾ ರೀತಿಯ ಸೌಲಭ್ಯ ನೀಡಿ ಮಕ್ಕಳನ್ನು ಸಾಕಿರುತ್ತಾರೆ, ಮಕ್ಕಳು ವಯಸ್ಕರನ್ನು ಇಳಿ ವಯಸ್ಸಿನಲ್ಲಿ ಪೋಷಣೆ ಮಾಡಬೇಕು ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇರುತ್ತಿದ್ದವು. ಹಿರಿಯರನ್ನು ಗೌರವಯುತವಾಗಿ ಕಾಣುತ್ತಿದ್ದರು,
ಆದರೆ ಇಂದು ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ, ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳಾಗಿವೆ. ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸಿದರೆ ಹಿರಿಯ ನಾಗರೀಕರು ಕಾನೂನಿನ ಮೂಲಕ ರಕ್ಷಣೆ ಪಡೆಯಬಹುದು, ಹಿರಿಯರು ಹೆದರುವ ಅವಶ್ಯಕತೆ ಇಲ್ಲ ಎಂಬುದಾಗಿ ಅವರು ತಿಳಿಸಿದರು.
ಕಾನೂನು ಸಲಹೆಗಾರ ವೈ.ಸೈಯದ್ ನವಾಜ್ ಮಾತನಾಡಿ, ಹಿರಿಯರು ಸೈಬರ್ ಅಪರಾಧದ ಬಗ್ಗೆ ಜಾಗೃತರಾಗಿರಬೇಕು, ಬ್ಯಾಂಕ್ ಖಾತೆ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಆಧಾರ್ ಓಟಿಪಿಯನ್ನು ಯಾರಿಗೂ ಕೊಡಬಾರದು 11 ಸಂಖ್ಯೆ ಇರುವ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ವೈಶಾಲಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಸಂಜಯ್, ಉಪಾಧ್ಯಕ್ಷೆ ಬಿ.ಟಿ.ಸವಿತಾ, ಕಾರ್ಯದರ್ಶಿಗಳಾದ ಮಂಜುನಾಥ್, ಹೆಚ್.ವಿ.ಅಜಯ್, ಎಚ್.ಲಕ್ಷ್ಮಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜೆ.ಏಕಾಂತಪ್ಪ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧೀರ್ ಪಟಕೆ, ತಾಪಂ ಸಹಾಯಕ ನಿರ್ದೇಶಕಿ ರಾಜೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.
